ಹಾವೇರಿ: ಬಿಎ ಪದವಿ ಪಡೆದಿರುವ ಮಾಜಿ ಸಚಿವ, ಹಾವೇರಿ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ 1,94,89,923 ರೂ. ಚರಾಸ್ತಿ ಹಾಗೂ 5,94,09,159 ರೂ. ಸ್ಥಿರಾಸ್ತಿ ಸೇರಿ ಒಟ್ಟು 7,88,99,082 ಕೋಟಿ ರೂ. ಹೊಂದಿದ್ದಾರೆ.
ಪತ್ನಿ ಮಂಜುಳಾ ಲಮಾಣಿ 1.97 ಕೋಟಿ ಚರಾಸ್ತಿ ಹಾಗೂ 82.58 ಲಕ್ಷ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಪುತ್ರಿ ಭಾನುಪ್ರಿಯಾ 38.06 ಲಕ್ಷ ರೂ. ಹಾಗೂ ಪುತ್ರ ದರ್ಶನ್ 17.83 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 2021-22ರಲ್ಲಿ ರುದ್ರಪ್ಪ 34,46,612 ರೂ. ಆದಾಯ ಹೊಂದಿದ್ದರೆ, ಪತ್ನಿ ಮಂಜುಳಾ 6,48,531ರೂ. ಹಾಗೂ ಪುತ್ರಿ ಭಾನುಪ್ರಿಯಾ 61,510 ರೂ. ಆದಾಯ ಗಳಿಸಿದ್ದಾರೆ. ಪುತ್ರ ದರ್ಶನ್ ಯಾವುದೇ ಆದಾಯ ಗಳಿಸಿಲ್ಲ ಎಂದು ಪ್ರಮಾಣ ಪತ್ರದಲ್ಲಿ ಘೋಷಿಸಿದ್ದಾರೆ.
ಖಂಡೇರಾಯನಹಳ್ಳಿಯಲ್ಲಿ 3 ಎಕರೆ 16 ಗುಂಟೆ ಜಮೀನು, ಹುಲಿಕಟ್ಟಿ ಗ್ರಾಮದಲ್ಲಿ ಜಂಟಿ ಮಾಲಿಕತ್ವದಲ್ಲಿ 18 ಎಕರೆ ಜಮೀನು, ದಾವಣಗೆರೆ ತಾಲೂಕು ಶ್ಯಾಮನೂರ ಗ್ರಾಮದಲ್ಲಿ ಜಂಟಿ ಮಾಲೀಕತ್ವದಲ್ಲಿ 2 ಎಕರೆ 34 ಗುಂಟೆ ಜಮೀನು ಹೊಂದಿದ್ದಾರೆ. ಬೆಂಗಳೂರು ಕೋರಮಂಗಲ ಬಡಾವಣೆಯ ಕ್ರೀಡಾ ಸಮುಚ್ಚಯದಲ್ಲಿ ಮನೆ, ರಾಣೆಬೆನ್ನೂರಿನ ಮಾರುತಿ ನಗರದಲ್ಲಿ 1 ಅಂತಸ್ತಿನ ಮನೆ, ಹಾವೇರಿ ನಗರದ ಇಜಾರಿ ಲಕಮಾಪುರದಲ್ಲಿ 2 ಅಂತಸ್ತಿನ ಮನೆ, ರಾಣೆಬೆನ್ನೂರ ಉಮಾಶಂಕರ ನಗರದಲ್ಲಿ ಮೂರು ಅಂತಸ್ತಿನ ಮನೆ ನಿರ್ಮಾಣ ಹಂತದಲ್ಲಿದೆ.
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ 1 ಖಾಲಿ ನಿವೇಶನ, ರಾಣೆಬೆನ್ನೂರ ತಾಲೂಕು ಹುಣಸಿಕಟ್ಟಿ ಗ್ರಾಮದಲ್ಲಿ 4 ಎಕರೆ ಕಲ್ಲು ಕ್ವಾರಿ, ಒಂದು ಕ್ರಷರ್ ಘಟಕ, ಕಚೇರಿ, ಬೆಂಗಳೂರು ಕೋರಮಂಗಲ ಬಡಾವಣೆಯಲ್ಲಿ ಕ್ರೀಡಾ ಸಮುಚ್ಚಯದಲ್ಲಿ 1 ಮಳಿಗೆ ಹಾಗೂ ರಾಣೆಬೆನ್ನೂರ ಖಂಡೇರಾಯನಹಳ್ಳಿ ಗ್ರಾಮದಲ್ಲಿ ರೇಷ್ಮೆ ಸಾಕಾಣಿಕೆ ಮನೆಯನ್ನು ಲಮಾಣಿ ಹೊಂದಿದ್ದಾರೆ.
2.48 ಕೋಟಿ ರೂ. ಸಾಲ
ರುದ್ರಪ್ಪ 2.48 ಕೋಟಿ ರೂ. ಸಾಲ ಹೊಂದಿದ್ದಾರೆ. ಕ್ರಷರ್ ಘಟಕ ನವೀಕರಣಕ್ಕಾಗಿ ಹಾವೇರಿಯ ಕೆಎಸ್‌ಎಫ್‌ಸಿಯಲ್ಲಿ 47,94 ಲಕ್ಷ ರೂ. ಸಾಲ ಪಡೆದಿದ್ದಾರೆ. ಹಾವೇರಿ ಇಜಾರಿ ಲಕಮಾಪುರದ ಮನೆ ಒತ್ತೆಗಾಗಿ ರಾಣೆಬೆನ್ನೂರ ಎಸ್‌ಬಿಐನಲ್ಲಿ 45 ಲಕ್ಷ ರೂ. ಸಾಲ ಪಡೆದಿದ್ದಾರೆ. ಇಜಾರಿ ಲಕಮಾಪುರದಲ್ಲಿ ಮನೆ ನಿರ್ಮಾಣಕ್ಕೆ 2.33 ಲಕ್ಷ ರೂ. ಸಾಲ ಪಡೆದಿದ್ದಾರೆ. ಕೆನರಾ ಬ್ಯಾಂಕ್‌ನಲ್ಲಿ 5.99 ಲಕ್ಷ ರೂ. ಬಂಗಾರ ಒತ್ತೆ ಸಾಲ ಪಡೆದಿದ್ದಾರೆ. ರುದ್ರಪ್ಪ ಪತ್ನಿ ಮಂಜುಳಾ 37.57 ಲಕ್ಷ ರೂ. ಹಾಗೂ ಪುತ್ರಿ ಭಾನುಪ್ರಿಯಾ 58.86 ಲಕ್ಷ ರೂ. ಸಾಲ ಹೊಂದಿದ್ದಾರೆ. ಪುತ್ರ ದರ್ಶನ್ ಯಾವುದೇ ಸಾಲ ಹೊಂದಿಲ್ಲ ಎಂದು ಲಮಾಣಿ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ.