ನಾನು ಬದುಕಿ ಬಂದಿದ್ದೇ ದೊಡ್ಡ ಪವಾಡ; ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ

Rudrappa Lamani PC
Published on

ಹಾವೇರಿ: ಚಿತ್ರದುರ್ಗದ ಬಳಿ ಎರಡು ತಿಂಗಳ ಹಿಂದೆ ನನಗೆ ಅಪಘಾತವಾಯಿತು. ಬದುಕಿ ಉಳಿದದ್ದೇ ದೊಡ್ಡ ಪವಾಡ. ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಆತ್ಮವಿಶ್ವಾಸ ಇದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧನಿದ್ದೇನೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಭರವಸೆ ವ್ಯಕ್ತಪಡಿಸಿದರು.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಇದೀಗ ಸ್ವಲ್ಪ ಚೇತರಿಸಿಕೊಂಡಿರುವ ಲಮಾಣಿ ಎರಡು ತಿಂಗಳ ನಂತರ ಸೋಮವಾರ ಕ್ಷೇತ್ರಕ್ಕೆ ಆಗಮಿಸಿದರು. ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆಸ್ಪತ್ರೆಯಲ್ಲಿ ಇದ್ದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೆ. ಅನೇಕ ಕಾರ್ಯಕ್ರಮಗಳಿಗಾಗಿ ಮಂಜೂರಾತಿ ಮಾಡಿಸಿದ್ದೇನೆ. ನನ್ನ ಆರೋಗ್ಯ ತೀರಾ ಹದಗೆಟ್ಟಿದೆ, ಸರಿ ಹೋಗುವುದು ಡೌಟು, ಎಂಬಿತ್ಯಾದಿ ಊಹಾಪೋಹಗಳನ್ನು ಕೆಲವರು ಸೃಷ್ಟಿಸಿದ್ದರು. ದೇವರು ದೊಡ್ಡವನು ಕಾಪಾಡಿದ್ದಾನೆ. ನಿಮ್ಮೆದುರು ಬಂದಿದ್ದೇನೆ ಎಂದು ಭಾವುಕರಾದರು. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಗರದಲ್ಲಿ ಒಟ್ಟು 3 ಹೊಸ ವಿದ್ಯಾರ್ಥಿ ನಿಲಯಗಳ ಕಟ್ಟಡಗಳ ನಿರ್ಮಾಣಕ್ಕಾಗಿ 12 ಕೋಟಿ ರೂ. ಹಾಗೂ ರಸ್ತೆಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಮಂಜೂರಾಗಿದೆ. ನಗರದಲ್ಲಿ ಮೆಟ್ರಿಕ್ ನಂತರದ ಬಾಲಕರ- 1 ಕಟ್ಟಡ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ-2 ಕಟ್ಟಡಗಳ ನಿರ್ಮಾಣಕ್ಕಾಗಿ ಶೀಘ್ರದಲ್ಲೇ ಭೂಮಿಪೂಜೆ ನೇರವೇರಿಸಲಾಗುವುದು. 14 ಹಳ್ಳಿಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಲು ಅನುಮತಿ ಸಿಕ್ಕಿದೆ. ಹೆಗ್ಗೇರಿ ಕೆರೆ ಅಭಿವೃದ್ಧಿಗೆ 4 ಕೋಟಿ ಯೋಜನೆ ಮಂಜೂರಾಗಿದೆ. ಅಪ್ಪರ ತುಂಗಾ ಯೋಜನೆ ಕಾಮಗಾರಿಗೆ 50 ಕೋಟಿ ಸಿಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ನಗರ ಸಭೆಯ ಸದಸ್ಯ ಸಂಜೀವಕುಮಾರ ನೀರಲಗಿ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಎಂ.ಎಂ ಮೈದೂರು, ಶ್ರೀಧರ ದೊಡ್ಡಮನಿ, ಶಿವಕುಮಾರ ತಾವರಗಿ, ಎ.ಎ ಖಾಜಿ, ಪರಮೇಶ್ವರ ಶಿವಣ್ಣನವರ, ಇತರರಿದ್ದರು.

ರೈತ ಸಂಪರ್ಕ ಕೇಂದ್ರ ಉದ್ಘಾಟನೆ

ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಕೇಂದ್ರ ನಿರ್ಮಿತಿ ಕೇಂದ್ರದ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ರೈತ ಸಂಪರ್ಕ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲಿ ಈ ಕಟ್ಟಡ ಲೋಕಾರ್ಪಣೆ ಮಾಡಿ ರೈತರ ಅನುಕೂಲಕ್ಕೆ ಒದಗಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net