

ಹಾವೇರಿ: ನಗರದಲ್ಲಿ ಸೋಮವಾರ ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಇವರ ಸಹಯೋಗದಲ್ಲಿ 2 ನೂತನ ಸಂಚಾರಿ ಆರೋಗ್ಯ ಬಸ್‌ಗಳಿಗೆ ಶಾಸಕ ಹಾಗೂ ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ ಚಾಲನೆ ನೀಡಿದರು.
ಜಿಲ್ಲೆಯ ಕಟ್ಟಡ ನಿರ್ಮಾಣ ಕಾರ್ಮಿಕರು ಅವರು ಕೆಲಸ ಮಾಡುವ ಸ್ಥಳಕ್ಕೆ ತೆರಳಿ ಉಚಿತ ಆರೋಗ್ಯ ಸೇವೆ, ಚಿಕಿತ್ಸೆ ಹಾಗೂ ಆರೋಗ್ಯ ಸಲಹೆ ನೀಡುವುದಕ್ಕಾಗಿ ಜಿಲ್ಲೆಗೆ 2 ಸಂಚಾರಿ ಆರೋಗ್ಯ ಘಟಕಗಳನ್ನು ಸಜ್ಜುಗೊಳಿಸಲಾಗಿದೆ. ಕಾರ್ಮಿಕ ಇಲಾಖೆ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ರೂಪುಗೊಂಡಿರುವ ಈ ಘಟಕಗಳಲ್ಲಿ ವಿವಿಧ ತಪಾಸಣೆಗಳು, ಹೈಟೆಕ್ ಆರೋಗ್ಯ ಸೌಲಭ್ಯ ವ್ಯವಸ್ಥೆಯಿದೆ. ಒಂದು ಕ್ಲಿನಿಕ್‌ನಲ್ಲಿ ಹೊರರೋಗಿಗಳಿಗೆ ದೊರೆಯುವ ಎಲ್ಲ ಸೌಲಭ್ಯಗಳು ಈ ಸಂಚಾರಿ ಆರೋಗ್ಯ ಘಟಕದಲ್ಲಿ ದೊರೆಯಲಿವೆ. ಕಾರ್ಮಿಕ ಕಾರ್ಡ್ ಹೊಂದಿರುವ ಜಿಲ್ಲೆಯ 1.2 ಲಕ್ಷ ಕಾರ್ಮಿಕರು ಹಾಗೂ ಅವರ ಕುಟುಂಬದವರು ಸೇರಿ ಒಟ್ಟು 4 ಲಕ್ಷಕ್ಕೂ ಅಧಿಕ ಜನರಿಗೆ ಆರೋಗ್ಯ ಸೇವೆ ದೊರೆಯಲಿದೆ.
ಸಂಚಾರಿ ಆರೋಗ್ಯ ಘಟಕದಲ್ಲಿ 25 ವೈದ್ಯಕೀಯ ಉಪಕರಣಗಳು, 5 ಪ್ರಯೋಗಾಲಯದ ಉಪಕರಣಗಳು ಹಾಗೂ 37 ವಿವಿಧ ವೈದ್ಯಕೀಯ ಬಳಕೆ ವಸ್ತುಗಳನ್ನು ಅಳವಡಿಸಲಾಗಿದೆ. ಸಿಬ್ಬಂದಿಗೆ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ ಇರುತ್ತದೆ. ಜಿಪಿಎಸ್ ವ್ಯವಸ್ಥೆಯೂ ಲಭ್ಯವಿದ್ದು, ತೆರಳುವ ಸ್ಥಳ, ಕಾರ್ಯಾಚರಣೆ ಸಮಯ, ಎಲ್ಲಿ ನಿಲ್ಲುತ್ತದೆ ಎಂಬ ಎಲ್ಲ ಮಾಹಿತಿಯೂ ಕಾರ್ಮಿಕ ಕಚೇರಿಗೆ ತಲುಪಲಿದೆ. ಒಪ್ಪಂದ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಯು ಕಾರ್ಯಾಚರಣೆಯನ್ನು ನಿರ್ವಹಿಸುತ್ತದೆ. ಸಮರ್ಪಿತ ವೈದ್ಯರು, ನರ್ಸ್‌ಗಳು, ಪ್ಯಾರಾಮೆಡಿಕಲ್ ಮತ್ತು ಸಮುದಾಯದ ಸ್ವಯಂ ಸೇವಕರನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ನಗರ ಸಭೆಯ ಸದಸ್ಯರಾದ ಸಂಜೀವಕುಮಾರ ನೀರಲಗಿ, ರೇಣುಕಾ ಪುತ್ರನ್, ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಇತರರಿದ್ದರು.