

ಹಾವೇರಿ: ವಾಹನಗಳು, ಕೈಗಾರಿಕೆಗಳ ವಾಯುಮಾಲಿನ್ಯದಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಮನುಷ್ಯರಿಗೆ ಶ್ವಾಸಕೋಶದ ಸಮಸ್ಯೆ, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತಿವೆ. ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹಾಗಾಗಿ, ವಾಯುಮಾಲಿನ್ಯ ತಡೆಗೆ ಹೆಚ್ಚು ಹೆಚ್ಚು ಗಿಡ, ಮರಗಳನ್ನು ಬೆಳೆಸುವ ಮೂಲಕ ವಾಯುಮಾನಲಿನ್ಯ ತಡೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ವಿನಯಾ ಕಾಟೋಕರ ಕಿವಿಮಾತು ಹೇಳಿದರು.
ಇಲ್ಲಿನ ಹಾವೇರಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನವೆಂಬರ್‌ನ ಚಳಿಗಾಲದ ಸಮಯದಲ್ಲಿ ವಾಯುಮಾಲಿನ್ಯದ ತೀವ್ರತೆ ಹೆಚ್ಚಾಗಿ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಮೂಹ ಸಾರಿಗೆ ಬಳಸುವ ಮೂಲಕ, ವಿದ್ಯುತ್ ಚಾಲಿತ ಗುಣಮಟ್ಟದ ವಾಹನಗಳನ್ನು ಬಳಸುವ ಮೂಲಕ ವಾಯುಮಾಲಿನ್ಯ ತಡೆಗಟ್ಟಲು ಮುಂದಾಗಬೇಕು ಎಂದು ಹೇಳಿದರು.
ಪ್ರಥಮ ದರ್ಜೆ ಸಹಾಯಕ ಶ್ರೀಪಾದ ಬ್ಯಾಳಿಯವರ ಮಾತನಾಡಿ, 1950ರ ದಶಕದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ರಸಾಯನಶಾಸ್ತ್ರ ಓದುತ್ತಿದ ಯುವಕ ಚಾರ್ಲ್ಸ್ ಡೇವಿಡ್ ಕೀಲಿಂಗ್ ಎಂಬ ವಿಜ್ಞಾನಿ ಗಾಳಿಯಲ್ಲಿನ ಕಾರ್ಬನ್ ಡೈ ಆಕ್ಸೈಡ್ ಅಳೆಯಲು ಮೊಟ್ಟಮೊದಲ ಬಾರಿಗೆ ಸ್ವಯಂಚಾಲಿತ ಸಾಧನವನ್ನು ಆವಿಷ್ಕಾರಗೊಳಿಸಿದ. 1958ರಲ್ಲಿ ವಾಯುಮಾಲಿನ್ಯದ ಪ್ರಮಾಣ 310 ಇತ್ತು. ನಂತರ ಹೆಚ್ಚಾಗುತ್ತಾ ಹೋಯಿತು. ವಾಯುಮಾಲಿನ್ಯ 320ನ್ನು ದಾಟಿದಾಗ ಜಗತ್ತಿನ ವಿಜ್ಞಾನಿಗಳ ಗಮನ ಹರಿಯಿತು. ವಿಜ್ಞಾನಿಯ ಹೆಸರಿನ ಕೀಲಿಂಗ್ ನಕ್ಷೆಯು ವಾಯುಮಾಲಿನ್ಯದ ಪ್ರಮಾಣವನ್ನು ಸೂಚಿಸುತ್ತದೆ ಎಂದರು.
ಕೀಲಿಂಗ್ ಅಧ್ಯಯನ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವಸಂಸ್ಥೆ ಭೂಮಿಯ ತಾಪಮಾನ ಏರಿಕೆ ಅಧ್ಯಯನ ಮಾಡಲು ಸಂಸ್ಥೆಯೊಂದನ್ನು ಸ್ಥಾಪಿಸಿತು. ಅದು ಪ್ರತಿ ವರ್ಷ ತನ್ನ ವರದಿ ಪ್ರಕಟಿಸುತ್ತಿದೆ. 2015ರಲ್ಲಿ ಪ್ಯಾರಿಸ್‌ನಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕಡಿಮೆ ಮಾಡಲು ನಡೆದ ಶೃಂಗಸಭೆಯಲ್ಲಿ ನಿರ್ಧರಿಸಲಾಯಿತು, 2016ರ ನವೆಂಬರ್‌ನಿಂದ ಈ ಕ್ರಮ ಜಾರಿಯಾಗಿದೆ ಎಂದರು.
ಪರಿಸರ ಸಂರಕ್ಷಣೆ, ನದಿ ಕೆರೆಗಳ ರಕ್ಷಣೆಯು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಹೆಚ್ಚು ಪ್ರಮಾಣದಲ್ಲಿ ಗಿಡ-ಮರಗಳನ್ನು ಬೆಳೆಸಿದಲ್ಲಿ ವಾಯುಮಾಲಿನ್ಯ ತಗ್ಗಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಚೇರಿ ಅಧೀಕ್ಷಕ ರಮೇಶ ದೊಡ್ಡಮನಿ, ಕೆ.ರಫಿಯಾ ಬೇಗಂ, ಸತೀಶ ವೈ.ಆರ್., ವಿನಯಕುಮರ ಕೆ.ಸಿ., ಅಕ್ಷಯಕುಮಾರ ಸಂಕಮ್ಮನವರ, ಮೆಹಬೂಬಲಿ ಹೊಟೆಗಾಳಿ, ವಿನು ಎಂ.ಎಸ್., ಇತರರು ಉಪಸ್ಥಿತರಿದ್ದರು. ಪ್ರಕಾಶ ತಲ್ಲೂರ ನಿರೂಪಿಸಿದರು.
ಪರಿಶುದ್ಧ ಇಂಧನ ಬಳಸಿ
ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ವಾಯುಮಾಲಿನ್ಯ ತಡೆಯಬಹುದಾಗಿದೆ. ಕಲಬೆರಕೆ ಇಂಧನ ಬಳಸದೇ ಪರಿಶುದ್ಧ ಇಂಧನ ಬಳಸಬೇಕು. ಪ್ರತಿಯೊಬ್ಬ ವಾಹನ ಮಾಲೀಕರು ಕಾಲಕಾಲಕ್ಕೆ ವಾಹನಗಳ ನಿರ್ವಹಣೆ ಮಾಡಿ ವಾಯುಮಾಲಿನ್ಯ ಹತೋಟಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎಂದು ಮೋಟಾರು ವಾಹನ ನಿರೀಕ್ಷಕರು ಸುನಿಲಕುಮಾರ ಎಚ್. ತಿಳಿಸಿದರು.