ಇಂದಿನಿಂದ ನಾಮಪತ್ರ ಸ್ವೀಕಾರ * ಸಭೆ ಸಮಾರಂಭಗಳಿಗೆ ಅನುಮತಿ ಕಡ್ಡಾಯ; ಚುನಾವಣಾಧಿಕಾರಿ ಕನಕರಡ್ಡಿ

Published on

ಹಾವೇರಿ: ಏ.13ರಿಂದ 20ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ಚುನಾವಣಾಧಿಕಾರಿಗಳ ಕಾರ್ಯಾಲಯ, 83 ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರ, ತಾಲೂಕು ಆಡಳಿತ ಸೌಧದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುತ್ತದೆ ಎಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹೇಳಿದರು.

ನಗರದ ತಾಲೂಕು ಆಡಳಿತ ಸೌಧದ 83 ಹಾವೇರಿ ಮೀಸಲು ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.14ರಂದು ಅಂಬೇಡ್ಕರ್ ಜಯಂತಿ ಹಾಗೂ 16ರಂದು ಭಾನುವಾರ ಹೊರತುಪಡಿಸಿ ಏ.20ರ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಏ.21ರಂದು ನಾಮಪತ್ರ ಪರಿಶೀಲಿಸಲಾಗುವುದು. ಏ.24 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮೇ 10ರಂದು ಮತದಾನ ನಡೆಯಲಿದ್ದು, ಮೇ.13ರಂದು ಮತ ಎಣಿಕೆ ನಡೆಯಲಿದೆ ಎಂದರು.
ಏ.13ರಂದು ಬೆಳಗ್ಗೆ ಕಚೇರಿಯಿಂದ ಎಲ್ಲ ಗ್ರಾಪಂ, ನಗರ ಸಭೆ, ತಹಸೀಲ್ದಾರ್ ಕಚೇರಿಗಳಿಗೆ ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ಕ್ಷೇತ್ರದಲ್ಲಿ ಒಟ್ಟು 253 ಮುಖ್ಯ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಇದರಲ್ಲಿ 1,500 ಮತದಾರರಿಗಿಂತ ಹೆಚ್ಚು ಇರುವ ನಾಲ್ಕು ಕಡೆ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 2,31,861 ಮತದಾರರಿದ್ದಾರೆ. ಇದರಲ್ಲಿ 1,18,671 ಪುರುಷ, 1,18,183 ಮಹಿಳಾ ಮತದಾರರು ಹಾಗೂ 7 ಇತರೆ ಮತದಾರರಿದ್ದಾರೆ ಎಂದರು.
ಅಕ್ರಮ ತಡೆಗೆ 9 ಫ್ಲೈಯಿಂಗ್ ಸ್ಕ್ವಾಡ್ ತಂಡ ರಚಿಸಲಾಗಿದೆ. ಬಳ್ಳಾರಿ ಗಡಿ ಕಂಚಾರಗಟ್ಟಿ, ತೆರೆದಹಳ್ಳಿ, ಯಲವಗಿ ಮತ್ತು ಆರ್‌ಟಿಒ ಕಚೇರಿ ಬಳಿ ಚೆಕ್‌ಪೋಸ್ಟ್ ತೆರೆಯಲಾಗಿದೆ. ಈವರೆಗೆ ಒಟ್ಟು ನಾಲ್ಕು ಕಡೆ ಹಣ ಜಪ್ತಿ ಮಾಡಲಾಗಿದೆ. ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿ ಮೂರು, ಕಂಚಾರಗಟ್ಟಿ ಚೆಕ್‌ಪೋಸ್ಟ್‌ನಲ್ಲಿ ಒಂದು ಪ್ರಕರಣ ದಾಖಲಾಗಿದೆ. 8 ಲಕ್ಷಕ್ಕೂ ಅಧಿಕ ಹಣ ಜಪ್ತಿ ಮಾಡಲಾಗಿದೆ. ಅಕ್ರಮ ಮದ್ಯ ಸಾಗಣೆ ಸಂಬಂಧಪಟ್ಟಂತೆ 40 ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net