ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಿ, ಮಾಂಗಲ್ಯ ಉಳಿಸಿ; ತಾಳಿ ಸಮೇತ ಸಮೇತ ಮುಖ್ಯಮಂತ್ರಿಗೆ ಪತ್ರ ಬರೆದ ನೊಂದ ಮಹಿಳೆಯರು

22 HVR 8
Published on

ಹಾವೇರಿ: ರಾಣೆಬೆನ್ನೂರ ತಾಲೂಕಿನಾದ್ಯಂತ ಖಾಸಗಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ವಿಪರೀತವಾಗಿದ್ದು, ಇವರ ಕಾಟಕ್ಕೆ ಹಲವು ಮಹಿಳೆಯರು ಚಿನ್ನದ ಮಾಂಗಲ್ಯ ಸರ ಒತ್ತೆ ಇಟ್ಟಿದ್ದಾರೆ. ಹಲವರ ಬದಲು ಬೀದಿಗೆ ಬಂದಿವೆ. ಇನ್ನಾದರೂ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಪ್ಪಿಸಿ ಮಾಂಗಲ್ಯ ಉಳಿಸಿ ಎಂದು ಆಗ್ರಹಿಸಿ ನೊಂದ ಮಹಿಳೆಯರು ಬುಧವಾರ ಮಾಂಗಲ್ಯ ಸಮೇತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂಚೆ ಮೂಲಕ ಪತ್ರ ರವಾನಿಸಿದರು.

ರಾಜ್ಯ ರೈತ ಸಂಘದ ರಾಣೆಬೆನ್ನೂರ ತಾಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ನೇತೃತ್ವದಲ್ಲಿ ಬುಧವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ಪ್ರತಿಭಟನಾ ರ‌್ಯಾಲಿ ಆರಂಭಿಸಲಾಯಿತು. ಎಸ್ಪಿ ಕಚೇರಿಗೆ ತೆರಳಿ ಎಸ್‌ಪಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಂತರ ಎಂಜಿ ರಸ್ತೆಯ ಅಂಚೆ ಕಚೇರಿಗೆ ತೆರಳಿ ಮಹಿಳೆಯರು ಮಾಂಗಲ್ಯದೊಂದಿಗೆ ಸಿಎಂಗೆ ಪತ್ರ ಬರೆದು ಅಂಚೆ ಮೂಲಕ ರವಾನಿಸಿದರು. ಬಳಿಕ ಅಲ್ಲಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಸಾಗಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ತಾಲೂಕಿಗೆ ಬಂದಿರುವ ಫೈನಾನ್ಸ್‌ನವರು ಬಡವರನ್ನೇ ಟಾರ್ಗೆಟ್ ಮಾಡಿ ಸಾಲ ಕೊಟ್ಟು, ವಸೂಲಿಗಾಗಿ ಪೀಡಿಸುತ್ತಿದ್ದಾರೆ. ದುಪ್ಪಟ್ಟು ಬಡ್ಡಿ ಕೊಡುವಂತೆ ದುಂಡಾವರ್ತನೆ ತೋರುತ್ತಿದ್ದಾರೆ. ರಾತ್ರಿ 7 ಗಂಟೆ ನಂತರ ಮನೆಯ ಬಳಿ ಬಂದು ರಾತ್ರಿ 11ರವರೆಗೆ ಸಾಲ ವಾಪಸ್ ಕೊಡುವಂತೆ ಕಾಟ ಕೊಡುತ್ತಿದ್ದಾರೆ. ಇಲ್ಲದಿದ್ದರೆ ಮನೆಗೆ ಬೀಗ ಹಾಕುತ್ತೇವೆ. ಮನೆ ಹರಾಜು ಹಾಕುತ್ತೇವೆ ಎಂದು ಬೆದರಿಸುತ್ತಿದ್ದಾರೆ.

ಫೈನಾನ್ಸ್‌ಗಳು ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಡವರ ರಕ್ತ ಹೀರುತ್ತಿವೆ. ಮಹಿಳೆಯರ ಆಧಾರ್ ಕಾರ್ಡ್ ಪಡೆದು ಬೇರೆಡೆ ಸಾಲ ಪಡೆಯುತ್ತಿದ್ದಾರೆ. ಸಾಲದ ಹಣ ವಾಪಸ್‌ಗಾಗಿ ಗೃಹಲಕ್ಷ್ಮೀ ಹಣಕ್ಕೂ ಕಣ್ಣು ಹಾಕುತ್ತಿದ್ದಾರೆ. ಇವರ ಕಾಟಕ್ಕೆ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ಊರು ತೊರೆದಿದ್ದಾರೆ. ಫೈನಾನ್ಸ್ ಹಾವಳಿ ತಡೆಗಟ್ಟುವಲ್ಲಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಿವಕುಮಾರ ತಳವಾರ, ಯಲ್ಲಪ್ಪ ಚಿಕ್ಕಣ್ಣನವರ, ಫಕ್ಕೀರೇಶ ಕಾಳೆ, ನೀಲಮ್ಮ ನಂದಣ್ಣನವರ, ಶಿಲ್ಪಾ ನಾಗಮ್ಮ, ರೂಪಾ ಕುಲಕರ್ಣಿ, ಮೀನಾಕ್ಷಿ ವಾಲ್ಮೀಕಿ, ಹುಚ್ಚನಗೌಡ ಜಿ.ಎಸ್., ಮದರಸಾಬ್ ಪತ್ತೇಖಾನವರ, ಸುಲೇಮಾನ್ ಅದೋನಿ, ರಿಯಾಜ್ ಮರಳ, ಇತರರಿದ್ದರು.

ಗಮನ ಸೆಳೆದಿದ್ದ ‘ವಿಜಯವಾಣಿ’

ಮೈಕ್ರೋ ಫೈನಾನ್ಸ್‌ಗಳ ಹಾವಳಿ ಕುರಿತು ‘ವಿಜಯವಾಣಿ’ ಮುಖಪುಟದಲ್ಲಿ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆಯುತ್ತಿದ್ದಂತೆ ಹಲವೆಡೆ ಪ್ರತಿಭಟನೆಗಳು ಆರಂಭವಾಗಿವೆ. ಇನ್ನಾದರೂ ಸರ್ಕಾರ ಈ ಬಗ್ಗೆ ಕಠಿಣ ನೀತಿ ರೂಪಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net