ಅನಧಿಕೃತ ಬಡಾವಣೆಗಳ ಮುಟ್ಟುಗೋಲು; ಕ್ರಮ ಕೈಗೊಳ್ಳದಿದ್ದರೆ ತಹಸೀಲ್ದಾರ್ ವಿರುದ್ಧ ಕ್ರಮ; ಸರ್ಕಾರದ ಆಸ್ತಿ ಎಂದು ಸೇರಿಸಲು ಸಚಿವ ಕೃಷ್ಣಭೈರೇಗೌಡ ಸೂಚನೆ

14 HVR 5 A
Published on

ಹಾವೇರಿ: ಇನ್ನುಮುಂದೆ ಯಾವುದೇ ಜಮೀನು ಪರಿವರ್ತನೆ ಇಲ್ಲದೇ, ಪ್ಲಾನ್ ಅಪ್ರೂವಲ್ ಇಲ್ಲದೇ ಅನಧಿಕೃತವಾಗಿ ಬಡಾವಣೆ ನಿರ್ಮಿಸಲು ಹೊರಟರೆ ಅಂತಹ ಬಡಾವಣೆಗಳನ್ನು ಸರ್ಕಾರದಿಂದ ಮುಟ್ಟುಗೋಲು ಹಾಕುವಂತೆ ಎಲ್ಲ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಕಂದಾಯ ಇಲಾಖೆಯ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನಧಿಕೃತ ಬಡಾವಣೆಗಳು ಹೆಚ್ಚುತ್ತಲೇ ಇವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉ್ತರಿಸಿದರು.

ಅನಧಿಕೃತ ಬಡಾವಣೆಗಳು ಕಂಡ ಕೂಡಲೇ ಸರ್ಕಾರದ ಆಸ್ತಿ ಎಂದು ಘೋಷಿಸಿ, ಪಹಣಿಯಲ್ಲಿ ಸರ್ಕಾರ ಎಂದು ನಮೂದಿಸಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದೇನೆ. ಮೇ ಅಂತ್ಯದೊಳಗೆ ಒಂದೊಂದು ತಾಲೂಕಲ್ಲಿ ಕನಿಷ್ಠ ಎರಡು ಅನಧಿಕೃತ ಬಡಾವಣೆಗಳನ್ನು ಗುರುತಿಸಬೇಕು. ಅನಧಿಕೃತ ಬಡಾವಣೆ ಆಗುವುದು ಕಂಡುಬಂದರೆ ಆಯಾ ತಹಸೀಲ್ದಾರ್ ಮುಟ್ಟುಗೋಲು ಹಾಕಬೇಕು. ಇಲ್ಲದಿದ್ದರೆ ತಹಸೀಲ್ದಾರ್ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ದಯವಿಟ್ಟು ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸಬೇಡಿ. ಅವುಗಳಿಗೆ ಜೀವನ ಪರ್ಯಂತ ಖಾತಾ ಸಿಗುವುದಿಲ್ಲ. ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹಳೆಯ ಅನಧಿಕೃತ ಲೇಔಟ್‌ಗಳ ಬಗ್ಗೆ ಸದ್ಯ ಏನೂ ಹೇಳಲ್ಲ. ಮೊದಲು ಮುಂದೆ ಆಗುವ ಅನಾಹುತ ತಪ್ಪಿಸುವ ಕೆಲಸ ಮಾಡಲಾಗುವುದು ಎಂದರು.

ಶಾಸಕರಾದ ಶ್ರೀನಿವಾಸ ಮಾನೆ, ಯು.ಬಿ ಬಣಕಾರ, ಯಾಸೀರ್‌ಖಾನ್ ಪಠಾಣ, ಎಸ್.ಎಫ್.ಎನ್. ಗಾಜೀಗೌಡ್ರ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಇತರರಿದ್ದರು.

ಕಂದಾಯ ಗ್ರಾಮಗಳ ಘೋಷಣೆಗೆ ತಯಾರಿ

ದಾಖಲೆಗಳೇ ಇಲ್ಲದಿರುವ ವಸತಿ ಪ್ರದೇಶಗಳಲ್ಲಿ ಜನ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕಾನೂನಿನ ಬಲ ಇಲ್ಲದೇ ದಾಖಲೆ ರಹಿತವಾದ ವಸತಿ ಪ್ರದೇಶಗಳಾಗಿವೆ. ಅವುಗಳಿಗೆ ಕಾನೂನಾತ್ಮಕ ಬಲ ಕೊಡಬೇಕು, ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು ಎಂದು ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 2016ರಲ್ಲಿ ಹಾವೇರಿ ಜಿಲ್ಲೆಗೆ ರಾಹುಲ್ ಗಾಂಧೀ ಪ್ರವಾಸ ಬಂದಿದ್ದಾಗ ಸೂಚಿಸಿದ್ದರು. ಆದರೆ, ಕಂದಾಯ ಗ್ರಾಮಗಳ ಘೋಷಣೆ ಕಾರ್ಯಕ್ರಮ ಈವರೆಗೆ ಪೂರ್ಣಗೊಂಡಿಲ್ಲ. ಆ ಕಾರ್ಯ ಪೂರ್ಣಗೊಳಿಸಲೇಬೇಕು ಎಂದು ನಮ್ಮ ಸರ್ಕಾರ ಬಂದ ಬಳಿಕ ಪ್ರಯತ್ನ ನಡೆದಿದೆ.

ಜಿಲ್ಲೆಯಲ್ಲಿ ಸದ್ಯಕ್ಕೆ ಎರಡು ತಾಲೂಕುಗಳಲ್ಲಿ 85 ತಾಂಡಾ, ಹಟ್ಟಿಗಳನ್ನು ಗುರುತಿಸಲಾಗಿದೆ. ಕೆಲ ಅಧಿಕಾರಿಗಳು ಗೊಂದಲಕ್ಕೀಡಾಗಿ ಅವಕಾಶ ಇರುವ ಗ್ರಾಮಗಳನ್ನೂ ತಿರಸ್ಕರಿಸಿದ್ದಾರೆ. ಯಾವೆಲ್ಲ ಗ್ರಾಮಗಳನ್ನು ಕಂದಾಯ ಗ್ರಾಮ ಮಾಡಲು ಅವಕಾಶವಿದೆ. ಅವುಗಳನ್ನೆಲ್ಲ ಕಂದಾಯ ಗ್ರಾಮ ಅಥವಾ ಕಂದಾಯ ಉಪಗ್ರಾಮ ಮಾಡುವಂತೆ ಸೂಚಿಸಿದ್ದೇನೆ. ಉಳಿದ ಎಲ್ಲ ತಾಲೂಕುಗಳಲ್ಲಿ ಗುರುತಿಸಿದರೆ ಇನ್ನೂ 100, 200 ಗ್ರಾಮಗಳು ಸಿಗಬಹುದು. ಇದರಿಂದ ಅಲ್ಲಿನ ಜನರಿಗೆ ಸಂಪೂರ್ಣ ಕಾನೂನಿನ ಹಕ್ಕು ಸಿಗುತ್ತದೆ. ಜೂ.30ರ ಒಳಗೆ ಬಿಟ್ಟು ಹೋದ ಗ್ರಾಮಗಳನ್ನು ಸೇರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಾವೇರಿ ಜಿಲ್ಲೆ ಸೇರಿ ರಾಜ್ಯದ 8 ಸಾವಿರ ಜನರಿಗೆ ಮೇ 20ರಂದು ಹೊಸಪೇಟೆಯಲ್ಲಿ ಹಕ್ಕು ಪತ್ರ ವಿತರಿಸಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಆನ್‌ಲೈನ್‌ನಲ್ಲೇ ಮೂಲ ದಾಖಲೆ

ತಾಲೂಕು ಕಚೇರಿಗಳಲ್ಲಿನ ಮೂಲ ದಾಖಲೆಗಳ ಇ ದಾಖಲೀಕರಣ ಕಾರ್ಯ ವೇಗ ಹೆಚ್ಚಿಸಲು ಸೂಚಿಸಿದ್ದೇನೆ. ಮುಂದೆ ಯಾವುದೇ ದಾಖಲೆಗಳನ್ನು ಆನ್‌ಲೈನ್‌ನಲ್ಲೇ ಪಡೆಯಬಹುದು. ಆನ್‌ಲೈನ್‌ನಲ್ಲೇ ಎಲ್ಲ ದಾಖಲೆ ನೀಡಲಾಗುವುದು. ಜನರ ಬೆರಳ ತುದಿಯಲ್ಲಿ ಆಸ್ತಿ ದಾಖಲೆ ಪಡೆಯುವ ಸೌಲಭ್ಯ ಒದಗಿಸಲಾಗುವುದು. ಮುಂದಿನ ತಿಂಗಳಲ್ಲಿ ಅಧಿಕೃತವಾಗಿ ಆರಂಭಿಸಲಾಗುವುದು. ಇದರಿಂದ ಜನ ತಹಸೀಲ್ದಾರ್ ಕಚೇರಿ ಅಲೆಯುವುದನ್ನು ತಪ್ಪಿಸಬಹುದು. ಮದ್ಯವರ್ತಿಗಳ ಹಾವಳಿ ತಪ್ಪಿಸಬಹುದು. ಭಗರ್ ಹುಕುಂ ಸಾಗುವಳಿದಾರರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದವರ ಎಲ್ಲ ಅರ್ಜಿಗಳನ್ನು ಎರಡು ತಿಂಗಳಲ್ಲಿ ಕಾನೂನು ಪ್ರಕಾರ ವಿಲೇವಾರಿ ಮಾಡಲು ಸೂಚಿಸಿದ್ದೇನೆ ಎಂದರು ಸಚಿವ ಕೃಷ್ಣ ಭೈರೇಗೌಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net