ವಸತಿ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ; ಪಾದಯಾತ್ರೆ ನಂತರ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಕೆ

31 HVR 9
Published on

ಹಾವೇರಿ: ಕರ್ನಾಟಕ ರಾಜ್ಯ ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಪಿಂಚಿಣಿ ಅಥವಾ ನಿವೃತ್ತಿ ಉಪದಾನ, ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ವಿಮೆ ಜ್ಯೋತಿ ಸಂಜೀವಿನಿ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವಸತಿ ಶಾಲಾ ಶಿಕ್ಷಕರ ಸಂಘ ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.

ಶನಿವಾರ ನಗರದ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಜಮಾಯಿಸಿದ ವಸತಿ ಶಾಲೆಗಳ ಶಿಕ್ಷಕರು ಗಾಂಧಿ ರಸ್ತೆ ಮೂಲಕ ಪಾದಯಾತ್ರೆ ನಡೆಸಿ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಯವರ ಕಚೇರಿಗೆ ತೆರಳಿ ಎಡಿಸಿ ಡಾ.ಎಲ್.ನಾಗರಾಜ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ಉಪಾಧ್ಯಕ್ಷೆ ರಮಾ ಗಲಗಲಿ ಮಾತನಾಡಿ, ಪ್ರಸ್ತುತ ವಸತಿ ಶಾಲೆಗಳನ್ನು ನಿರ್ವಹಣೆ ಮಾಡಲು ವಸತಿ ಶಿಕ್ಷಣ ನಿರ್ದೇಶನಾಲಯ ರಚಿಸಬೇಕು. ಇಲ್ಲದಿದ್ದರೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಶಾಲೆಗಳನ್ನು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸಹಿತವಾಗಿ ಆಯಾ ಇಲಾಖೆಗಳ ವಶಕ್ಕೆ ನೀಡಬೇಕು. ಮನೆ ಬಾಡಿಗೆ ಭತ್ಯೆ ಶಿಕ್ಷಕರ ವೇತನದಲ್ಲಿ ಕಡಿತವಾಗುತ್ತಿದ್ದು, ಅದರಿಂದ ವಿನಾಯಿತಿ ನೀಡುವ ಜತೆಗೆ ವಸತಿ ಶಾಲಾ ಸಿಬ್ಬಂದಿಗೆ ಶೇ.10ರಷ್ಟು ವಿಶೇಷ ಭತ್ಯೆ ಮಂಜೂರು ಮಾಡುವಂತೆ ಒತ್ತಾಯಿಸಿದರು.

ಶಿಕ್ಷಣ ಇಲಾಖೆಯ ಹಾಗೂ ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಹೋಲಿಸಿದಲ್ಲಿ ವಸತಿ ಶಾಲೆಗಳ ಶಿಕ್ಷಕರ ಕಠಿಣ ಪರಿಶ್ರಮದ ಫಲವಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ವಸತಿ ಶಾಲೆಗಳ ಫಲಿತಾಂಶ ಅತ್ಯುತ್ತಮ ಸಾಧನೆ ತೋರಿವೆ. ಆದಾಗ್ಯೂ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ದೊರಕುವ ಸೌಲಭ್ಯಗಳು ವಸತಿ ಶಾಲಾ ಸಿಬ್ಬಂದಿಗೆ ದೊರಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಂಜುನಾಥ ಮಲ್ಲಾಪುರ ಮಾತನಾಡಿ, ಈಗಾಗಲೇ ವಸತಿ ಶಾಲೆಗಳ ಸಿಬ್ಬಂದಿ ರಾಜ್ಯಮಟ್ಟದಲ್ಲಿ ಮೇ 26ರಿಂದಲೇ ಹೋರಾಟ ಆರಂಭಿಸಿದ್ದು, ಸರ್ಕಾರ ನಮ್ಮ ಸಂಕಷ್ಟಗಳಿಗೆ, ಬೇಡಿಕೆಗಳಿಗೆ ಶೀಘ್ರವೇ ಸ್ಪಂದಿಸಲಿದೆ ಎಂಬ ಆಶಾಭಾವನೆ ಹೊಂದಿದ್ದೇವೆ. ತಪ್ಪಿದಲ್ಲಿ ತರಗತಿ ಬಹಿಷ್ಕರಿಸುವ ಮೂಲಕ ನಮ್ಮ ಹೋರಾಟ ಮುಂದುವರೆಯಲಿದೆ. ಈಗಾಗಲೇ ಕ್ರೈಸ್ ಶೈಕ್ಷಣಿಕ ನಿರ್ದೆಶಕರು, ಆರ್‌ಎಸ್‌ಇಎ ರಾಜ್ಯ ಪದಾಧಿಕಾರಿಗಳು ಮತ್ತು ಪ್ರಾಚಾರ್ಯರ ಸಂಘಟನೆಗಳ ಜತೆ ಸಭೆ ನಡೆಸಲು ಮುಂದಾಗಿದ್ದು, ಇದು ನಮ್ಮ ಹೋರಾಟಕ್ಕೆ ಸಿಕ್ಕ ಸ್ಪಂದನೆ ಎಂದು ಹೇಳಿದರು.

ಸಂಘಟನಾ ಕಾರ್ಯದರ್ಶಿ ವಿರೇಶ ಮರಿಗೌಡ್ರ, ವೆಂಕಪ್ಪ ಮೀಸಿ, ನಿರ್ಮಲಾ ರೋಡಗಿ, ಕವಿತಾ ನೀರಲಗಿ, ವಿರೇಶ ಹರವಿ, ಮಾಧವ ಕಾಮನಹಳ್ಳಿ, ಮಲ್ಲಯ್ಯ ಇಂಗಳಗಿಮಠ, ಫಕ್ಕೀರೇಶ ಕೋರಿ, ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net