ಗೃಹ ಬಳಕೆ ಸಿಲಿಂಡರ್ ದುರ್ಬಳಕೆ ತಡೆಗಟ್ಟಿ; ಸರ್ಕಾರಕ್ಕೆ ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಆಗ್ರಹ

Published on

ಹಾವೇರಿ: ಗೃಹ ಬಳಕೆಯ ಸಿಲಿಂಡರ್‌ಗಳನ್ನು ಗೃಹೋಪಯೋಗಿ ಕೆಲಸದ ಬದಲಾಗಿ ಹೋಟೆಲ್, ಬೇಕರಿ, ಆಟೋ, ಓಮಿನಿಗಳಂತಹ ವಾಣಿಜ್ಯ ಚಟುವಟಿಕೆಗಳಿಗೆ ದುರ್ಬಳಕೆಯಾಗುತ್ತಿದೆ. ಗೃಹಬಳಕೆ ಸಿಲಿಂಡರ್ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಕರ್ನಾಟಕ ವಿಭಾಗದ ಮುಖ್ಯಸ್ಥ ಚೇತನಕುಮಾರ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಹೆಚ್ಚಾಗಿರುವ ಕಾರಣ ವಾಣಿಜ್ಯ ಸಂಸ್ಥೆಗಳು ಗೃಹಬಳಕೆ ಸಿಲಿಂಡರ್‌ಗಳನ್ನು ಅಂದರೆ 14.2ಕೆಜಿ ಸಿಲಿಂಡರ್‌ಗಳನ್ನು ವ್ಯಾಪಕವಾಗಿ ಬಳಸಲು ಪ್ರಾರಂಭಿಸಿವೆ. ಕೆಲವೆಡೆ 14.2ಕೆಜಿ ಸಿಲಿಂಡರ್‌ನಲ್ಲಿರುವ ಅನಿಲವನ್ನು 19 ಕೆಜಿ ವಾಣಿಜ್ಯ ಸಿಲಿಂಡರ್ ಆಗಿ ಪರಿವರ್ತಿಸಲಾಗುತ್ತಿದೆ. ಅದಕ್ಕಾಗಿ ದೇಶಿಯ ಸಿಲಿಂಡರ್‌ಗಳನ್ನು ವಾಹನಗಳಲ್ಲಿ ವ್ಯಾಪಕವಾಗಿ ಬಳಸಲಾರಂಭಿಸಿದೆ. ಇದು ಅತ್ಯಂತ ಗಂಭೀರವಾಗಿದ್ದು, ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ.ನಷ್ಟವಾಗುತ್ತಿದೆ. ಜತೆಗೆ ಅಕ್ರಮವಾಗಿ ರೀಫಿಲಿಂಗ್ ಘಟನೆಗಳು ನಡೆಯುತ್ತಿದ್ದು, ಸ್ಫೋಟ, ಬೆಂಕಿ ಅವಘಡ ಸಂಭವಿಸುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಅಕ್ರಮ ತಡೆಗಟ್ಟಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.

ಜತೆಗೆ ಗ್ರಾಹಕರು ಕೂಡ ದೇಶಿಯ ಸಿಲಿಂಡರ್‌ನ್ನು ವಿತರಿಸುವಾಗ ಅದು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸೀಲ್‌ನ್ನು ಪರಿಶೀಲಿಸಬೇಕು. ಖಾಲಿ ಸಿಲಿಂಡರ್‌ಗಳು ಮತ್ತು ಪೂರ್ಣ ಸಿಲಿಂಡರ್‌ಗಳ ತೂಕವನ್ನು ಪರಿಶೀಲಿಸಬೇಕು. ಶಾಂಪೂ ಅಥವಾ ಸಾಬೂನು ನೀರನ್ನು ಸೇರಿಸುವ ಮೂಲಕ ಸಿಲಿಂಡರ್ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಗಮನಿಸಬೇಕು. ಸಿಲಿಂಡರ್‌ನ್ನು ಎತ್ತಲು ಒದಗಿಸಲಾದ ಜಾಗದ ಬಳಿ ಮೂರು ಬಾರಗಳಿದ್ದು, ಅದರಲ್ಲಿ ಭದ್ರತಾ ಪರೀಕ್ಷೆಯ ವರ್ಷವನ್ನು ಬರೆಯಲಾಗಿದೆ ಇದನ್ನು ಕೂಡ ಗಮನಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net