

ಹಾವೇರಿ: ಭಾರತ ಸೇರಿದಂತೆ ಪ್ರಪಂಚದ 110 ದೇಶಗಳಲ್ಲಿ ರೆಡ್ ಕ್ರಾಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, 1.80 ಕೋಟಿಗೂ ಅಧಿಕ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಸಮಾಜ ಸೇವೆಯೇ ರೆಡ್ ಕ್ರಾಸ್ ಸಂಸ್ಥೆಯ ಧೇಯವಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಚೇರ್ಮನ್ ಸಂಜೀವಕುಮಾರ ನೀರಲಗಿ ಹೇಳಿದರು.
ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಭವನದಲ್ಲಿ ಗುರುವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾವೇರಿ ಜಿಲ್ಲಾ ಶಾಖೆ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಗಾಲಿ ಕುರ್ಚಿ ಹಾಗೂ ಶ್ರವಣೋಪಕರಣಗಳ ವಿತರಣೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅಂತಾರಾಷ್ಟ್ರೀಯ ಮಾನವೀಯ ಸೇವಾ ಸಂಸ್ಥೆಯಾಗಿದೆ. ಭಾರತದಲ್ಲಿ 1920ರಲ್ಲಿ ಹಾಗೂ ಕರ್ನಾಟಕದಲ್ಲಿ 1921ರಿಂದ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಇದು ಮಾನವೀಯ ನೆಲೆಗಟ್ಟಿನ ಸಂಸ್ಥೆಯಾಗಿದೆ. ವಿಶ್ವ ರೆಡ್‌ಕ್ರಾಸ್ ಸಂಸ್ಥೆ ಸ್ಥಾಪಕ ಶಾಂತಿದೂತ ಹೆನ್ರಿ ಡ್ಯೂನಾಂಟ್ ಅವರನ್ನು ನಾವು ಸದಾ ಸ್ಮರಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ರೆಡ್ ಕ್ರಾಸ್‌ಸಂಸ್ಥೆ ಅತ್ಯಂತ ಕ್ರಿಯಾಶೀಲವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಕಟ್ಟಡಕ್ಕೆ ಮಾಜಿ ಸಂಸದರು, ಹಾಲಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಿಂದಿನ ಜಿಲ್ಲಾಧಿಕಾರಿಯವರು ಸೇರಿ ಹಲವರು ಆರ್ಥಿಕ ಸಹಾಯ ಮಾಡಿದ್ದಾರೆ. ಜಿಲ್ಲಾಧಿಕಾರಿಯವರು 25 ಲಕ್ಷ ರೂ. ಅನುದಾನ ನೀಡಿದ್ದಾರೆ. ಮತ್ತೆ 25 ಲಕ್ಷ ಅನುದಾನ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಅಧ್ಯಕ್ಷ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಯುದ್ಧ ಸಮಯದಲ್ಲಿ ಗಾಯಗೊಂಡವರಿಗೆ, ನೈಸರ್ಗಿಕ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಪರಿಹಾರ ಕಾರ್ಯದಲ್ಲಿ ಹಾಗೂ ಸಾರ್ವಜನಿಕರಿಗೆ ಚಿಕಿತ್ಸೆ ಮಾಡುವ ಸೇವಾ ಸಂಸ್ಥೆಯಾಗಿದೆ. ಆರೋಗ್ಯದ ಬಗ್ಗೆ ಅರಿವು ಮತ್ತು ಶಿಕ್ಷಣ, ರಕ್ತನಿಧಿಗಳು, ಅಂಗವಿಕಲರಿಗೆ ಸಾಧನ-ಸಲಕರಣೆ ವಿತರಣೆ, ಯುದ್ಧ ಮತ್ತು ಪ್ರಕೃತಿ ವಿಕೋಪಗಳಿಂದಾಗಿ ಚದುರಿ ಹೋಗಿರುವ ಕುಟುಂಬಗಳ ಸದಸ್ಯರನ್ನು ಮತ್ತೆ ಒಂದುಗೂಡಿಸುವುದು ಸೇರಿದಂತೆ ಅನೇಕ ಸಾಮಾಜಿಕ ಕಳಕಳಿಯ ಕಾರ್ಯವನ್ನು ಮಾಡುತ್ತಿದೆ. ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥನೀತಿ, ಸ್ವಯಂಸೇವಾ ಮನೋಧರ್ಮ ಹಾಗೂ ಸರ್ವತಾ ತತ್ವದಂತಹ ತತ್ವಗಳನ್ನು ಮೈಗೂಡಿಸಿಕೊಂಡ ಸಂಸ್ಥೆಯಾಗಿದೆ ಎಂದು ಹೇಳಿದರು.
ವಿವಿಧ ಶಾಲಾ-ಕಾಲೇಜ್‌ಗಳ ಮುಖ್ಯಸ್ಥರಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಅಂಗವಿಕಲರಿಗೆ ಗಾಲಿ ಕುರ್ಚಿ ಹಾಗೂ ಶ್ರವಣೋಪಕರಣಗಳ ವಿತರಣೆ ಮಾಡಲಾಯಿತು. ಹನುಮಂತಗೌಡ ಗೊಲ್ಲರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆ ಉಪಾಧ್ಯಕ್ಷೆ ರುಚಿ ಬಿಂದಲ್, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಆಶು ನದಾಫ್, ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸ ಡಾ.ಪಿ.ಆರ್ ಹಾವನೂರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲೇಶ ಕರಿಗಾರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಸಮಿತಿ ಸದಸ್ಯ ರವಿ ಮೆಣಸಿನಕಾಯಿ, ಗೌರವ ಕಾರ್ಯದರ್ಶಿ ಡಾ.ನಿಲೇಶ ಎಂ.ಎನ್., ಖಜಾಂಚಿ ಪ್ರಭು ಹಿಟ್ನಳ್ಳಿ, ಸದಸ್ಯರಾದ ಉಡಚಪ್ಪ ಮಾಳಗಿ, ರವಿ ಹಿಂಚಿಗೇರಿ ಹಾಗೂ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ, ಡಾ.ಅಂಕಿತ ಆನಂದ, ಇತರರು ಉಪಸ್ಥಿತರಿದ್ದರು.
ಸಂಸ್ಥೆಯ ಜಿಲ್ಲಾ ಗೌರವ ಸಹ ಕಾರ್ಯದರ್ಶಿ ನಿಂಗಪ್ಪ ಆರೇರ ಸ್ವಾಗತಿಸಿದರು. ಸುಧಾಕರ ದೈವಜ್ಞ ನಿರೂಪಿಸಿದರು.
ಯುವ ರೆಡ್‌ಕ್ರಾಸ್ ಶಾಖೆ:
ಕಾಲೇಜ್‌ಗಳಲ್ಲಿ ಯುವ ರೆಡ್‌ಕ್ರಾಸ್ ಶಾಖೆ ಆರಂಭಿಸಲಾಗುತ್ತಿದ್ದು, ಯುವ ಸಮೂಹ ಸದಸ್ಯತ್ವ ಪಡೆದುಕೊಂಡು ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಗೆ ಮುಂದೆ ಬರಬೇಕು. ನೌಕರರು ಸೇರಿ ಎಲ್ಲರೂ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ನೀರಲಗಿ ಮನವಿ ಮಾಡಿಕೊಂಡರು.
ರಕ್ತದಾನ ಶಿಬಿರ:
ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ವಿವಿಧ-ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನೌಕರರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.
ಸದಸ್ಯರ ಸಂಖ್ಯೆ ಹೆಚ್ಚಾಗಲಿ
ಜಿಲ್ಲೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆಯಲ್ಲಿ 1,056 ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಆದರೆ 23 ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರಿದ್ದು, ಬರುವ ದಿನಗಳಲ್ಲಿ 10 ಸಾವಿರ ಸದಸ್ಯರನ್ನು ನೋಂದಾಯಿಸುವ ಗುರಿ ಹಾಕಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಿಗೆ ಸಂಜೀವಕುಮಾರ ನೀರಲಗಿ ಸಲಹೆ ನೀಡಿದರು.