

ಹಾವೇರಿ: ರಂಗಾಯಣದಿಂದ ಕಲಾವಿದರಿಗೆ ಮತ್ತು ಕಲಾವಿದರಿಂದ ರಂಗಾಯಣಕ್ಕೆ ಆಗಬೇಕಿರುವ ಕಾರ್ಯಗಳನ್ನು ಅರಿತುಕೊಳ್ಳಲು ಸಾಗುತ್ತಿದ್ದು, ಅದಕ್ಕಾಗಿ ಹಾವೇರಿಯಿಂದಲೇ ಶುರು ಮಾಡಿರುವೆ. ಉತ್ತರ ಕರ್ನಾಟಕದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಶ್ರಮಿಸುವೆ ಎಂದು ಧಾರವಾಡ ರಂಗಾಯಣದ ನಿರ್ದೇಶಕ ಡಾ.ರಾಜು ತಾಳಿಕೋಟಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ರಂಗಾಯಣ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಂಗಾಯಣದ ಕಾರ್ಯ ಚಟುವಟಿಕೆಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ನಾಲ್ಕು ದಶಕಗಳಿಂದ ರಂಗಭೂಮಿಗೆ ಸೇವೆ ಸಲ್ಲಿಸಿರುವೆ. ನನಗೆ ಕೊಟ್ಟಿರುವ ಜವಾಬ್ದಾರಿ ಹಿನ್ನೆಲೆಯಲ್ಲಿ ರಂಗಾಯಣದ ಬೈಲಾ ಅನ್ವಯ ಕಾರ್ಯೋನ್ಮುಖವಾಗುವೆ. ಗ್ರಾಮೀಣ ಪ್ರದೇಶದಲ್ಲಿ ಕಲೆ ಇಂದಿಗೂ ತನ್ನ ಜೀವಂತಿಕೆ ಉಳಿಸಿಕೊಂಡಿದೆ. ಎಲೆಮರೆ ಕಾಯಿಯಂತಿರುವ ಗ್ರಾಮೀಣ ಪ್ರತಿಭೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಲ್ಲಿ ಸಂಚರಿಸಿ ಕಲಾವಿದರ ಮತ್ತು ರಂಗಾಸಕ್ತರ ಅಹವಾಲು ಆಲಿಸುತ್ತಿರುವೆ. ಅದಕ್ಕೆ ತಮ್ಮ ಸಹಕಾರ ಬಯಸುವೆ ಎಂದು ಕೋರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಶಶಿಕಲಾ ಹುಡೇದ ಮಾತನಾಡಿ, ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯ ಕಲಾವಿದರು ಒಂದೇ ತಾಯಿಯ ಮಕ್ಕಳು. ಕಲಾವಿದರ ಭಾವನೆಗಳಿಗೆ ಸ್ಪಂದಿಸಲು ರಂಗಾಯಣ ವಿನೂತನ ಯೋಜನೆ ರೂಪಿಸುತ್ತಿದೆ. ರೆಪರ್ಟರಿ ಸ್ಥಾಪಿಸಿ ಕಲಾವಿದರು ವರ್ಷವಿಡೀ ರಂಗ ಚಟುವಟಿಕೆಗಳಲ್ಲಿ ತೊಡಗಬೇಕಿದೆ. ಅನುಭವಿ ನಿರ್ದೇಶಕರೊಂದಿಗೆ ನಾಟಕಗಳನ್ನು ಕಟ್ಟುವ ಮೂಲಕ ಆದಾಯ ಸಂಗ್ರಹಿಸುವ ಗುರಿ ಇದೆ. ರಂಗಭೂಮಿ ಅವನತಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಕಲಾವಿದರು ವಿಘಟನೆಗೊಳ್ಳುತ್ತಿದ್ದಾರೆ. ಕಲಾವಿದರ ಮಧ್ಯೆ ಸಮನ್ವಯ ಸಾಧಿಸುವ ಸವಾಲನ್ನು ಮೀರಬೇಕಿದೆ ಎಂದರು.
ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ರಂಗಾಯಣ ನಿರ್ದೇಶಕರಾಗಿ ನೇಮಕವಾಗಿರುವ ಡಾ.ರಾಜು ತಾಳಿಕೋಟಿ ಅಧಿಕಾರ ವಿಕೇಂದ್ರೀಕರಣ ಆಗಬೇಕು ಎಂದು ಬಯಸಿ ಕಲಾವಿದರ ಬಳಿಗೆ ಬಂದಿರುವುದು ಶ್ಲಾಘನೀಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ, ಪ್ರಭು ಗುರಪ್ಪನವರ, ಮಾಲತೇಶ ಅಂಗೂರ, ಚಂದ್ರಶೇಖರ ಹೆಬ್ಬಾರ, ನಾಗರಾಜ ಧಾರೇಶ್ವರ, ಸಿ.ಎಸ್.ಮರಳಿಹಳ್ಳಿ, ಚಂದ್ರಶೇಖರ ಮಾಳಗಿ, ಈರಣ್ಣ ಬೆಳವಡಿ, ಪರಿಮಳಾ ಜೈನ್, ಶಶಿಕಲಾ ಅಕ್ಕಿ, ಲತಾ ಪಾಟೀಲ, ಆರ್.ಸಿ.ನಂದಿಹಳ್ಳಿ, ಮುತ್ತಣ್ಣ ಹಿರೇಮಠ, ಶಂಕರ ತುಮ್ಮಣ್ಣನವರ, ಇತರರು ಉಪಸ್ಥಿತರಿದ್ದರು.
ಸಾಹಿತಿ ಕಲಾವಿದರ ಬಳಗದವರು ರಂಗಗೀತೆ ಪ್ರಸ್ತುತ ಪಡಿಸಿದರು. ವೈ.ಬಿ.ಆಲದಕಟ್ಟಿ ಸ್ವಾಗತಿಸಿದರು. ಮಂಜುನಾಥ ಸಣ್ಣಿಂಗಣ್ಣನವರ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ವಂದಿಸಿದರು.