

ಹಾವೇರಿ: ನಮ್ಮ ದೇಶದ ಅನ್ನ ನೀರು, ಗಾಳಿ ಸೇವಿಸಿ ಪಾಕಿಸ್ತಾನಕ್ಕೆ ಬೆಂಬಲಿಸುವ ದೇಶದ್ರೋಹಿಗಳು ನಮ್ಮ ದೇಶದಲ್ಲಿದ್ದಾರೆ. ಅದರಲ್ಲಿ ಕೆಲ ರಾಜಕಾರಣಿಗಳೂ ಸೇರಿಕೊಂಡಿರುವುದು ದುರದೃಷ್ಟಕರ ಸಂಗತಿ. ಮೊದಲು ಇಂಥವರನ್ನು ಹುಡುಕಿ ಗಲ್ಲಿಗೇರಿಸಬೇಕು ಎಂದು ಅರೆಮಲ್ಲಾಪುರದ ಶ್ರೀ ಪ್ರಣವಾನಂದರಾಮ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿರುವ ದಾಳಿ ಅತ್ಯಂತ ಖಂಡನೀಯವಾದದ್ದು. ಪಾಪಿ ಪಾಕಿಸ್ತಾನ ಯಾವಾಗಲೂ ಭಾರತದ ವಿರುದ್ಧವೇ ಇದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಅಂತಹ ಪಾಕಿಸ್ತಾನಕ್ಕೆ ಭಾರತ ಪ್ರತ್ಯುತ್ತರ ನೀಡಲಿದೆ. ನಮ್ಮ ದೇಶ, ನಮ್ಮ ಸಂಸ್ಕೃತಿಯನ್ನು ಯಾವತ್ತೂ ಹಾಳು ಮಾಡಿಕೊಂಡೇ ಬಂದಿರುವ ಪಾಕ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.
ಈ ವಿಚಾರವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಕೆಲ ನಿರ್ಣಯಗಳನ್ನು ತೆಗೆದುಕೊಂಡಿರುವುದು ಶ್ಲ್ಯಾಘನೀಯ. ಕರ್ನಾಟಕದಲ್ಲಿ 140 ಪಾಕಿಸ್ತಾನಿಗಳಿದ್ದಾರೆ ಎಂಬ ಸುದ್ದಿ ಇದೆ. ಇವರೆಲ್ಲರನ್ನೂ ಇದೇ 27ನೇ ತಾರೀಖಿನೊಳಗೆ ಪಾಕ್‌ಗೆ ಕಳುಹಿಸಬೇಕು. ಹಿಂದುಗಳಿರುವ ದೇಶ ಜಗತ್ತಿನಲ್ಲಿ ಭಾರತ ಮಾತ್ರ. ಇಂತಹ ಪವಿತ್ರವಾದ ಭಾರತದ ವಿರುದ್ಧ ಷಡ್ಯಂತ್ರ ರೂಪಿಸುವ ಪಾಕಿಸ್ತಾನಕ್ಕೆ ನಮ್ಮ ಸೈನಿಕರು ಉತ್ತರ ಕೊಡಲಿದ್ದಾರೆ ಎಂದರು.
ಸಂದರ್ಭ ಬಂದರೆ ನಾವು ಸನ್ಯಾಸಿಗಳು, ಸ್ವಾಮೀಜಿಗಳು ಪಾಕಿಸ್ತಾನ ಬಾರ್ಡರ್‌ಗೆ ಹೋಗುತ್ತೇವೆ. ಕಲಬುರಗಿಯಲ್ಲಿ ಭಜರಂಗದಳದವರು ಪಾಕಿಸ್ತಾನ ಧ್ವಜವನ್ನು ರಸ್ತೆಯಲ್ಲಿ ಎಸೆದಿದ್ದಾರೆ. ಆದರೆ, ಅದೇ ಪಾಕಿಸ್ತಾನ ಧ್ವಜವನ್ನು ಕೆಲ ಮುಸ್ಲಿಂ ಸಮುದಾಯದವರು ರಕ್ಷಣೆ ಮಾಡುತ್ತಾರೆಂದರೆ ಇವರು ಎಷ್ಟರಮಟ್ಟಿಗೆ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ ಎಂಬುದನ್ನು ಹಿಂದುಗಳು ಅರಿಯಬೇಕಿದೆ ಎಂದರು.
ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡದೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷದವರೆಲ್ಲರೂ ಜಾತಿ, ಪಕ್ಷ ಬೇಧ ಮರೆತು ನಾವೆಲ್ಲರೂ ಭಾರತೀಯರು ಎಂದು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.