ರಾಜ್ಯ ಸರ್ಕಾರದ ವಿರುದ್ಧ ಬಾರಕೋಲ ಚಳವಳಿ ಅ.30ರಂದು ; ನವಯುಗ ಸಂಸ್ಥಾಪಕ ಅಧ್ಯಕ್ಷ ಸಂತೋಷಕುಮಾರ ಪಾಟೀಲ ಹೇಳಿಕೆ

Navayuga
Published on

ರಾಣೆಬೆನ್ನೂರ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಅ.30ರಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ನವಯುಗ ಹಾಗೂ ಸಂತೋಷಕುಮಾರ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಬಾರಕೋಲ ಚಳುವಳಿ ಆಯೋಜಿಸಲಾಗಿದೆ ಎಂದು ನವಯುಗ ಸಂಸ್ಥಾಪಕ ಅಧ್ಯಕ್ಷ ಸಂತೋಷಕುಮಾರ ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ವೈಫಲ್ಯದಿಂದ ಬಳಲುತ್ತಿದೆ. ಇದರ ನಡುವೆ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಈಗಾಗಲೇ ರೈತರು ಬರಗಾಲದಿಂದ ತತ್ತರಿಸಿದ್ದಾರೆ. ಆದರೆ, ಇದುವರೆಗೂ ಬರಗಾಲ ಘೋಷಣೆಯಾಗಿರುವ ತಾಲೂಕುಗಳಲ್ಲಿ ಪ್ರಗತಿ ಪರಿಶೀಲನೆ ನಡೆಸದೆ ರೈತರಿಗೆ ಪರಿಹಾರ ನೀಡದೆ ರೈತ ವೀರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ರೈತರು ತಮ್ಮ ಅಳಿದುಳಿದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಮರ್ಪಕವಾಗಿ ವಿದ್ಯುತ್ ಕೊಡುತ್ತಿಲ್ಲ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವೆರೆಗೆ ಒಟ್ಟು 6 ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ಬೆಳೆಹಾನಿ ಪರಿಹಾರ ನೀಡಬೇಕು. ಬ್ಯಾಂಕ್‌ಗಳು ರೈತರಿಗೆ ನೋಟಿಸ್ ನೀಡುವುದಕ್ಕೆ ಕಡಿವಾಣ ಹಾಕಬೇಕು. ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನೂರಾರು ರೈತರು, ಅಭಿಮಾನಿಗಳು ಚಳವಳಿಯಲ್ಲಿ ಭಾಗವಹಿಸುವರು ಎಂದರು.
ಅ.30ರಂದು ಬೆಳಗ್ಗೆ 10 ಗಂಟೆಗೆ ಕೆಇಬಿ ವಿನಾಯಕ ದೇವಸ್ಥಾನದಿಂದ ಬಾರಕೋಲು ಚಳುವಳಿ ಪ್ರಾರಂಭವಾಗಲಿದೆ. ಪಿಬಿ ರಸ್ತೆ ಮೂಲಕ ಬಸ್ ನಿಲ್ದಾಣ, ಕೋರ್ಟ್ ವೃತ್ತ, ಹಲಗೇರಿ ರಸ್ತೆ, ಕುರುಬಗೇರಿ ಕ್ರಾಸ್ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಯುವರಾಜ ಬಾರಾಟಕ್ಕೆ, ಗುಡ್ಡೇಶ ನಿಟ್ಟೂರು, ರಾಜು ಹೊಂಬರಡಿ, ಕಿರಣ ಬುಳ್ಳನಗೌಡ್ರ, ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net