ರಾಣೆಬೆನ್ನೂರ: ರಂಭಾಪುರಿ ವೀರ ಸಿಂಹಾಸನ ಶಾಖಾ ಹಿರೇಮಠದ ತಾಲೂಕಿನ ಲಿಂಗಹಳ್ಳಿಯ ಶ್ರೀ ಜಗದ್ಗುರು ರೇಣಕ ಜೀವನ ಜ್ಞಾನ ವಿಜ್ಞಾನ ಕೇಂದ್ರ ಮತ್ತು ಸ್ಪಟಿಕ ಶಿವಲಿಂಗ ಕ್ಷೇತ್ರದಲ್ಲಿ ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.26ರಿಂದ ಮಾ.3ರವರೆಗೆ ಮಹಾಶಿವರಾತ್ರಿಯ ಹಿನ್ನಲೆಯಲ್ಲಿ ಸ್ಟಟಿಕ ಶಿವಲಿಂಗಕ್ಕೆ ಹಾಗೂ ಪಚ್ಚೆ ಶಿವಲಿಂಗಗಳಿಗೆ ರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ, ಪುಷ್ಪಾರ್ಚನೆ ನಡೆಯಲಿದೆ. ಮಾ.3ರಂದು ಚೌಡೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವಿದೆ. ಮಾ.12ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಶಿವದೀಕ್ಷಾ ಬೆಳಗ್ಗೆ 6ಕ್ಕೆ ರಥೋತ್ಸವ ಗುಗ್ಗಳ, ನಂತರ ಧರ್ಮಸಭೆ ನಡೆಯಲಿದೆ.
ಕಾಶಿಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರ ಸ್ವಾಮೀಜಿ ನೇತೃತ್ವ ವಹಿಸುವರು.
ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು, ರಾಮಘಟ್ಟ ಪುರವರ್ಗಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು, ದಿಂಡದಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯರು, ಮದ್ದರಕಿ ಹಿರೇಮಠದ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಮಾ.16ರಂದು ಸಂಜೆ 4.30ರಿಂದ ವಿವಿಧ ಗ್ರಾಮಗಳ ಭಜನಾ ತಂಡದಿಂದ ಭಜನೆ ಕಾರ್ಯಕ್ರಮ ನಡೆಯಲಿವೆ ಎಂದರು.
ಮಠದಲ್ಲಿ ಈಗಾಗಲೇ ಸ್ಪಟಿಕ ಲಿಂಗವಿದೆ. ಆದರೆ ಜಗತ್ತಿನಲ್ಲಿ ಅತಿದೊಡ್ಡದಾದ ಸ್ಟಟಿಕ ಲಿಂಗ ಸ್ಥಾಪನೆ ಮಾಡುವ ಉದ್ದೇಶವಿದ್ದು, ಈಗಾಗಲೇ ಅಗತ್ಯ ತಯಾರಿ ಮಾಡಲಾಗಿದೆ. ನೇಪಾಳ ದೇಶದಿಂದ ಸ್ಪಟಿಕ ಲಿಂಗ ಬರಲಿದ್ದು, ಯಾವಾಗ ಬರಲಿದೆ ಎಂಬುದು ಸ್ಪಷ್ಟತೆಯಿಲ್ಲ. ಹೀಗಾಗಿ ಮುಂದಿನ ಎರಡು ತಿಂಗಳಲ್ಲಿ ಸ್ಪಟಿಕ ಲಿಂಗ ಬಂದ ನಂತರದಲ್ಲಿ ಸ್ಥಾಪನೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರವೀಂದ್ರಗೌಡ ಪಾಟೀಲ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಶಿವಕುಮಾರ ಜಾಧವ, ಇತರರಿದ್ದರು.