ಬೈಕ್‌ಗಾಗಿ ಮಗ ಆತ್ಮಹತ್ಯೆ, ಮಗನ ಹಿಂದೆ ತಾಯಿಯೂ ಆತ್ಮಹತ್ಯೆ !; ಕರೂರ ಗ್ರಾಮದಲ್ಲಿ ತಾಯಿ-ಮಗ ದಾರುಣ ಅಂತ್ಯ

suicide
Published on

ಕುಮಾರಪಟ್ಟಣ (ರಾಣೆಬೆನ್ನೂರ): ಬೈಕ್ ಕೊಡಿಸಿ ಎಂದು ಹಠ ಹಿಡಿದ ಮಗ ತಾಯಿಯೊಂದಿಗೆ ಜಗಳವಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಕಂಡ ತಾಯಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ರಾಣೆಬೆನ್ನೂರ ತಾಲೂಕಿನ ಕರೂರ ಗ್ರಾಮದಲ್ಲಿ ಶನಿವಾರ ನಡೆದಿದೆ.
ಧನರಾಜ ಸುರೇಶ ನಾಯಕ (18) ಹಾಗೂ ಈತನ ತಾಯಿ ಬಾಗ್ಯಮ್ಮ ನಾಯಕ (43) ಆತ್ಮಹತ್ಯೆಗೆ ಶರಣಾದವರು. ಸ್ಥಳಕ್ಕೆ ಕುಮಾರಪಟ್ಟಣ ಪಿಎಸ್‌ಐ ಪ್ರವೀಣ ವಾಲೀಕಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಧನರಾಜ ತನಗೆ ಬೈಕ್ ತೆಗೆದುಕೊಳ್ಳಲು ಹಣ ಬೇಕೆಂದು ತಂದೆ- ತಾಯಿ ಬಳಿ ಬೆಳಗ್ಗೆ ಜಗಳ ತೆಗೆದಿದ್ದ. ಕೂಲಿ ಮಾಡಿಕೊಂಡಿರುವ ತಂದೆ ಸುರೇಶ ಆಯ್ತು ಹೇಗಾದರೂ ಮಾಡಿ ಕೊಡಿಸುತ್ತೇನೆ ಎಂದು ಕೆಲಸಕ್ಕೆ ಹೋಗಿದ್ದರು. ನಂತರ ತಾಯಿ ಮಗನಿಗೆ ಬುದ್ದಿಮಾತು ಹೇಳಿದ್ದರು.
ತಾಯಿ ಪಕ್ಕದ ಮನೆಗೆ ಹೋಗಿದ್ದ ವೇಳೆ ಮಧ್ಯಾಹ್ನ ಧನರಾಜ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿ ಮನೆಗೆ ಬರುತ್ತಿದ್ದಂತೆ ಮಗನ ಸ್ಥಿತಿ ಕಂಡು ದಂಗಾಗಿದ್ದಾರೆ. ಇದರಿಂದ ದುಃಖಿತರಾಗಿ ಕರೂರ ರೈಲು ನಿಲ್ದಾಣದ ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net