

ಹಾವೇರಿ: ಕರ್ನಾಟಕ ಲೋಕಸೇವಾ ಆಯೋಗದಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಡಿ.7 ಮತ್ತು 8ರಂದು ಹಾವೇರಿ ಹಾಗೂ ರಾಣೆಬೆನ್ನೂರ ನಗರದ 28 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು ಎಂದು ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ಎಲ್.ನಾಗರಾಜ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವರ ಆಯೋಜಿಸಿದ್ದ ಕೆಪಿಎಸ್‌ಸಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ 150 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳ ಪರೀಕ್ಷೆಯ ಪೂರ್ವಭಾವಿ ಸಭೆಯಯಲ್ಲಿ ಅವರು ಮಾತನಾಡಿದರು.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿಗಳು, ಉಪನ್ಯಾಸಕರು ಪರೀಕ್ಷಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರದ ಹೊರ ವಲಯ ಹಾಗೂ ಕೊಠಡಿಯ ಒಳಗೆ ಶಿಸ್ತುಬದ್ಧವಾಗಿ ಪರೀಕ್ಷಾ ನಿಯಮಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಸಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಎಚ್.ಉಮೇಶಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಡಿವೈಎಸ್‌ಪಿ ಗಿರೀಶ ಭೋಜಣ್ಣನವರ, ತಹಸೀಲ್ದಾರ ಶರಣಮ್ಮ, ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಸಿಸಿಟಿವಿ ಕಡ್ಡಾಯ
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ, ಜಾಮರ್ ಅಳವಡಿಕೆ ಹಾಗೂ ಕೊಠಡಿಯೊಳಗೆ ಗಡಿಯಾರ ಕಡ್ಡಾಯವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪರೀಕ್ಷಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಸೂಕ್ತ ಪೀಠೋಪಕರಣ ಒಳಗೊಂಡಂತೆ ಮೂಲಸೌಕರ್ಯ ಒದಗಿಸಬೇಕು. ಸಿಸಿ ಕ್ಯಾಮರಾ ಕಣ್ಗಾವಲಿನಲ್ಲೇ ಪ್ರಶ್ನೆ ಪತ್ರಿಕೆ ತೆರೆಯುವುದು ಹಾಗೂ ಉತ್ತರ ಪತ್ರಿಕೆ ಬಂಡಲ್ ಮಾಡಬೇಕು ಎಂದು ಎಡಿಸಿ ತಿಳಿಸಿದರು.
10,526 ಅಭ್ಯರ್ಥಿಗಳು
ಡಿ.7ರಂದು 24 ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನ 2ರಿಂದ 4ರವರೆಗೆ ಒಂದು ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. 5,422 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಡಿ.8ರಂದು 28 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ 11.30 ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ಎರಡು ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 10,526 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು ಎಡಿಸಿ ನಾಗರಾಜ.
ಟಿಶರ್ಟ್, ಶೂ ನಿಷೇಧ
ಪರೀಕ್ಷಾರ್ಥಿಗಳು ತುಂಬು ತೋಳಿನ ಶರ್ಟ್, ಟಿ ಶರ್ಟ್ ಧರಿಸುವಂತಿಲ್ಲ. ಸರಳ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ಯಾವುದೇ ರೀತಿಯ ಆಭರಣಗಳನ್ನು ಧರಿಸುವಂತಿಲ್ಲ (ಮಂಗಳ ಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ). ಶೂ ಮತ್ತು ಸಾಕ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ. ಸರಳ ಚಪ್ಪಲಿ ಧರಿಸಬೇಕು. ಇಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಬ್ಲೂಟೂತ್, ಪೇಜರ್, ವೈರಲೆಸ್ ಸೆಟ್ ಹಾಗೂ ರಿಸ್ಟ್ ವಾಚ್‌ಗಳನ್ನು ನಿಷೇಧಿಸಿದೆ. ಈ ಕುರಿತಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಸೂಚಿಸಿದರು.