ವಿಕಸಿತ ಭಾರತ ಕೇವಲ ಕನಸಲ್ಲ ಗುರಿ; ಭಾರತ ಅಭಿವೃದ್ಧಿ ಹೊಂದುವುದು ಶತಸಿದ್ಧ; ಕರ್ನಾಟಕ ವೈಭವದಲ್ಲಿ ಉಪರಾಷ್ಟ್ರಪತಿ ಜಗದೀಪ ಧನಕರ ಭರವಸೆ

7 HVR 1 B
Published on

ಹಾವೇರಿ/ ರಾಣೆಬೆನ್ನೂರ: ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ ಭಾರತ ಇಂದು ಜಗತ್ತಿನ ಐದನೇ ಬಲಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಭವಿಷ್ಯದಲ್ಲಿ ಮೂರನೇ ಬಲಿಷ್ಠವಾದ ದೇಶ ನಮ್ಮದಾಗಲಿದೆ. ವಿಕಸಿತ ಭಾರತ ಕೇವಲ ನಮ್ಮ ಕನಸಲ್ಲ ಗುರಿಯಾಗಿದೆ. 2040ರ ಒಳಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದು ಶತಸಿದ್ಧ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಜಗದೀಪ ಧನಕರ್ ಭರವಸೆ ವ್ಯಕ್ತಪಡಿಸಿದರು. ರಾಣೆಬೆನ್ನೂರ ನಗರ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ಪರಿವರ್ತನ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ‘ಕರ್ನಾಟಕ ವೈಭವ’ ವೈಚಾರಿಕ ಹಬ್ಬ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹತ್ತು ವರ್ಷಗಳ ಹಿಂದೆ ಭಾರತ ಹೇಗಿತ್ತು. ನಿರಾಶೆಯಿಂದ ಕೂಡಿದ ವ್ಯವಸ್ಥೆ ಆಗಿತ್ತು. ಈಗ ಕೇಂದ್ರ ಸರ್ಕಾರದ ಸಕಾರಾತ್ಮಕ, ಪಾರದರ್ಶಕ ಕ್ರಮಗಳಿಂದ ವ್ಯವಸ್ಥೆ ಅಭಿವೃದ್ಧಿಯತ್ತ ಸಾಗಿದೆ. ಜಗತ್ತು ಇಂದು ಭಾರತದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದೆ. ಈ ನಡುವೆ ಕೆಲ ದೇಶಗಳು ಹಾಗೂ ದೇಶದಲ್ಲಿನ ದೇಶವಿರೋಧಿಗಳು ರಾಷ್ಟ್ರ ವಿರೋಧಿ ಭಾವನೆ ಬಿಂಬಿಸಲು ಸಂಚು ಮಾಡುತ್ತಿದ್ದಾರೆ. ಮಾತೃದೇಶಕ್ಕೆ ಅಪಮಾನ ಮಾಡುತ್ತಿದ್ದಾರೆ. ಬೇರೆ ಯಾವುದೇ ದೇಶದಲ್ಲಿ ಇಂತಹ ಕೆಲಸ ನಡೆಯುವುದಿಲ್ಲ. ಈ ಕುರಿತು ಚಿಂತನೆ ಆಗಬೇಕಿದೆ. ಷಡ್ಯಂತ್ರ ಮಾಡುವವರಿಗೆ ಸರ್ಕಾರ ವಿದೇಶಿ ಕಠಿಣ ಶಾಸನದ ಮೂಲಕ ಕೇಂದ್ರ ಸರ್ಕಾರ ಎಚ್ಚರಿಕೆ ಕೊಟ್ಟಿದೆ ಎಂದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಡಾ.ಸುದೇಶ್ ಧನಕರ್, ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ, ಕರ್ನಾಟಕ ಮುಕ್ಯ ವಿವಿ ಕುಲಪತಿ, ಪ್ರೊ.ಎಸ್.ವಿ. ಹಲಸೆ, ಪ್ರಜ್ಞಾ ಪ್ರವಾಹ ಅಖಿಲ ಭಾರತ ಸಹ ಸಂಯೋಜಕ ರಘುನಂದನ, ಕರ್ನಾಟಕ ವೈಭವ ಸಂಯೋಜಕ ಕೆ.ಎನ್.ಪಾಟೀಲ, ಇತರರು ಪಾಲ್ಗೊಂಡಿದ್ದರು.

ಯುವಕರು ದೇಶ ಮುನ್ನಡೆಸಲಿ

ಕರ್ನಾಟಕ ಕಲೆ, ಸಂಸ್ಕೃತಿ, ಪರಂಪರೆಯ ತವರೂರು. ದೇಶದಲ್ಲಿ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಯ ಕುರಿತು ಯಾಕೆ ಚರ್ಚೆ ಆಗುತ್ತದೆ ಎಂಬುದು ಆಶ್ಚರ್ಯ ಉಂಟು ಮಾಡುತ್ತದೆ. ವಿವಿಧತೆಯಲ್ಲಿ ಏಕತೆ ಎಂಬುದು ನಮ್ಮ ದೇಶದ ಜನರ ರಕ್ತದಲ್ಲೇ ಇದೆ. ರಾಷ್ಟ್ರೀಯ ಭಾವನೆ ಎಲ್ಲರಲ್ಲೂ ಮೂಡಬೇಕು. ನಮಗಿಂತ ದೇಶ ದೊಡ್ಡದು ಎಂದು ಯುವಕರು ದೇಶವನ್ನು ಮುನ್ನಡೆಸಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ ಧನಕರ್ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net