ಬಂದ್ ಬದಲು ಸಾಂಕೇತಿಕ ಪ್ರತಿಭಟನೆ; ಹಾವೇರಿ, ರಾಣೆಬೆನ್ನೂರ ಸೇರಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

22 HVR 7 A
Published on

ಹಾವೇರಿ/ ರಾಣೆಬೆನ್ನೂರ: ನಾಡದ್ರೋಹಿ ಚಟುವಟಿಕೆ ಮಾಡುತ್ತಿರುವ ಎಂಇಎಸ್ ಸಂಘಟನೆ ನಿಷೇಧಿಸಲು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ನೀಡಿದ್ದ ಕರೆಗೆ ಶನಿವಾರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಕೇಂದ್ರ ಹಾವೇರಿ ಮತ್ತು ರಾಣೆಬೆನ್ನೂರಲ್ಲಿ ಬಂದ್ ಬದಲು ಸಾಂಕೇತಿಕ ಪ್ರತಿಭಟನೆ ಮಾಡಲಾಯಿತು.

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದಿಂದ ಕೆಲಕಾಲ ಪ್ರತಿಭಟನೆ ನಡೆಸಲಾಯಿತು. ನಾಡದ್ರೋಹಿ ಎಂಇಎಸ್ ನಿಷೇಧಿಸುವಂತೆ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಸೇನೆ ಜಿಲ್ಲಾಧ್ಯಕ್ಷ ರಾಮು ತಳವಾರ, ಇತರರಿದ್ದರು.

ಪ್ರತಿಭಟನಾ ರ‌್ಯಾಲಿ :

ರಾಣೆಬೆನ್ನೂರ ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಪದಾಧಿಕಾರಿಗಳು ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಸಂಘದ ರವಿಂದ್ರಗೌಡ ಪಾಟೀಲ ಮಾತನಾಡಿ, ಬೆಳಗಾವಿಯಲ್ಲಿ ಮುಗ್ಧ ಮರಾಠಿಗರನ್ನು ಬಳಸಿಕೊಂಡು ಎಂಇಎಸ್ ನಾಯಕರು ನಾಡದ್ರೋಹಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪುಂಡರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ನಮ್ಮ ರಾಜ್ಯದ ಬಸ್ಸುಗಳು ಮಹಾರಾಷ್ಟ್ರಕ್ಕೆ ಹೋದ ಸಮಯದಲ್ಲಿ ಚಾಲಕರನ್ನು ಅಲ್ಲಿನ ಪುಂಡರ ನಡೆದುಕೊಂಡು ರೀತಿಯಿಂದ ನಾಡಿನ ಜನರಿಗೆ ಅವಮಾನವಾಗಿದೆ. ಅಲ್ಲದೆ ರಾಜ್ಯದಲ್ಲಿ ಇದ್ದುಕೊಂಡು ನಮ್ಮ ಪಿಡಿಒ ಮೇಲೆ ದೌರ್ಜನ್ಯ ಮಾಡಿದ ಮರಾಠಿ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕನ್ನಡ ಸಂಘಟನೆ ಪ್ರಮುಖರಾದ ನಿತ್ಯಾನಂದ ಕುಂದಾಪುರ, ಗಣೇಶ ಗೋಣಿಬಸಮ್ಮನವರ, ಮಂಜುನಾಥ ದುಗ್ಗತ್ತಿ, ಈರಣ್ಣ ಹಲಗೇರಿ, ಹಾಲೇಶ ತಳವಾರ, ರೇಣುಕಾ ಲಮಾಣಿ, ನಾಗವ್ವ ಬಂಕಾಪುರ, ಕೊಟ್ರೇಶಪ್ಪ ಎಮ್ಮಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net