

ರಾಣೆಬೆನ್ನೂರ: ತಾಲೂಕಿನ ಹಲಗೇರಿ ಸರ್ಕಾರಿ ಶಾಲೆಯಲ್ಲಿ ಭಾನುವಾರ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಮತ್ತು ಶ್ರೀ ಹಾಲಸಿದ್ದೇಶ್ವರ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು.
1993-94ನೇ ಸಾಲಿನ ಪ್ರಾಥಮಿಕ ಶಾಲೆ ಮತ್ತು 1996-97ನೇ ಸಾಲಿನ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳು ಮೂರು ದಶಕಗಳ ನಂತರ ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಿವೃತ್ತ ದೈಹಿಕ ಶಿಕ್ಷಕ ಬಿ.ಎಸ್.ಅರಳಿ ಮಾತನಾಡಿ, ಒಳ್ಳೆಯ ವಿದ್ಯಾರ್ಥಿಗಳಿಂದ ಉತ್ತಮ ಶಿಕ್ಷಕರು ಆಗಲು ಸಾಧ್ಯ. ಶಿಕ್ಷಣ, ಜ್ಞಾನ ಪಸರಿಸುವಲ್ಲಿ ಗುರು-ಶಿಷ್ಯರಿಬ್ಬರ ಜೀವನ ಸಾರ್ಥಕತೆ ಇದೆ. ಮಕ್ಕಳು ವಿದ್ಯಾವಂತರಾಗಿ, ಪ್ರತಿಭಾವಂತರಾಗಿ ಸತ್‌ಪ್ರಜೆಗಳಾಗಿ ಬೆಳೆಯಬೇಕು. ಕ್ರೀಡೆ, ಚಿತ್ರಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕಲೆಗಳನ್ನು ತೊಡಗುವ ಮೂಲಕ ಉತ್ತಮ ಸಂಸ್ಕಾರವಂತರಾಗಬೇಕು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಎಂ.ಸಿ.ಮಠದ ಮಾತನಾಡಿ, ಗುರು-ಶಿಷ್ಯರ ಸಂಬಂಧ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಪವಿತ್ರ ಬಂಧವಾಗಿದೆ, ಇದು ಜ್ಞಾನ, ಮಾರ್ಗದರ್ಶನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕ. ಗುರುವು ಶಿಷ್ಯನಿಗೆ ಜ್ಞಾನ ನೀಡುವುದಲ್ಲದೆ, ಜೀವನದ ಮೌಲ್ಯ, ನೀತಿ ಕಲಿಸುತ್ತಾರೆ. ಶಿಷ್ಯನು ಗುರುವಿಗೆ ಗೌರವ, ಭಕ್ತಿ ಮತ್ತು ವಿಧೇಯತೆ ತೋರಿಸುತ್ತಾರೆ. ಈ ಸಂಬಂಧವು ಕೇವಲ ಶೈಕ್ಷಣಿಕವಲ್ಲ, ಆದರೆ ಆಧ್ಯಾತ್ಮಿಕ ಮತ್ತು ವೈಯಕ್ತಿಕ ಬೆಳವಣಿಗೆಗೂ ಸಹ ಮುಖ್ಯವಾಗಿದೆ ಎದರು.
ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ ಹೊಸಳ್ಳಿ ಮಾತನಾಡಿ, ಇದೀಗ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದೆ. ಇಲ್ಲಿ ಶೈಕ್ಷಣಿಕ ಮೌಲ್ಯಗಳು ಗೌಣವಾಗಿ, ವ್ಯಾಪಾರಿ ಮನೋಭಾವ ಎದ್ದುಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಬಡವಿದ್ಯಾರ್ಥಿಗಳಿಗೆ ಆಶಾಕಿರಣವಾಗಿವೆ. ಅವರ ಬದುಕು ಕಟ್ಟಿಕೊಳ್ಳಲು ಜ್ಞಾನ ಉಣಬಡಿಸುತ್ತವೆ. ಹಳೇ ವಿದ್ಯಾರ್ಥಿಗಳು, ಸಮಾಜ ಸಹ ಸರ್ಕಾರಿ ಜ್ಞಾನದೇಗಲದ ಅಭಿವೃದ್ಧಿಗೆ ಸಹಕಾರ ನೀಡಬೇಕಾಗಿದೆ ಎಂದರು.
ಗುರುಗಳಿಗೆ ಗೌರವ
ನಿವೃತ್ತ ದೈಹಿಕ ಶಿಕ್ಷಕ ಬಿ.ಎಸ್.ಅರಳಿ, ನಿವೃತ್ತ ಗಣಿತ ಶಿಕ್ಷಕ ಎಚ್.ಪಿ.ಬಗಾಡೆ, ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ ಹೊಸಳ್ಳಿ, ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಎಸ್.ಅಂಗಡಿ, ಗಣಿತ ಶಿಕ್ಷಕ ಎಸ್.ವಿ.ಬ್ಯಾಳಿ, ಕನ್ನಡ ಶಿಕ್ಷಕ ಸಿ.ಆರ್.ಮುದ್ದಪ್ಪಳವರ, ನಿವೃತ್ತ ಮುಖ್ಯ ಶಿಕ್ಷಕ ಆರ್.ಎಚ್.ಐರಣಿ, ಎಫ್.ಕೆ.ಬಿಸಲಹಳ್ಳಿ, ನಿವೃತ್ತ ಶಿಕ್ಷಕ ಎಂ.ಸಿ.ಮಠದ, ನಿವೃತ್ತ ಸಿಬ್ಬಂದಿ ಬಿ.ವೈ.ಘೋಡಕೆ, ಉಮೇಶ ಕಂಬಾಳಿಮಠ ಅವರಿಗೆ ಗುರುವಂದನೆ ಅರ್ಪಿಸಲಾಯಿತು.