ಗರ್ಭಕೋಶ ಸಂತ್ರಸ್ತರಿಗೆ ಪರಿಹಾರ ಕೊಡಿಸಿ; ತಪ್ಪಿತಸ್ಥರಿಗೆ ಶಿಕ್ಷೆ ನೀಡಿ; ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರಕ್ಕೆ ನೊಂದ ಮಹಿಳೆಯರ ಆಗ್ರಹ

Garbhakosha A
Published on

ಹಾವೇರಿ: ಅಧಿಕಾರಿಗಳ ತಪ್ಪಿನಿಂದ ವಿನಾಕಾರಣ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಸಂತ್ರಸ್ಥ ಮಹಿಳೆಯರಿಗೆ ರಾಣೆಬೆನ್ನೂರ ತಾಲೂಕಿನ ನೊಂದ ಮಹಿಳೆಯರಿಗೆ ಸೂಕ್ತ ಪರಿಹಾರ ಕೊಡಿಸುವ ಮೂಲಕ ನ್ಯಾಯ ದೊರಕಿಸಿಕೊಡುವಂತೆ ಸಂತ್ರಸ್ಥ ಮಹಿಳೆಯರು ಆಗ್ರಹಿಸಿದರು.
ಇಲ್ಲಿನ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಗೇಟ್ ಬಳಿ ಬುಧವಾರ ರಾಣೇಬೆನ್ನೂರ ತಾಲೂಕು ಸಂತ್ರಸ್ತ ಮಹಿಳಾ ಸಂಘದ ವತಿಯಿಂದ ನೂರಾರು ಸಂತ್ರಸ್ತ ಮಹಿಳೆಯರು ಪ್ರತಿಭಟನೆ ನಡೆಸಿದರು. ಎಡಿಸಿ ಪೂಜಾರ ವೀರಮಲ್ಲಪ್ಪ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
2013ರಿಂದ 2018ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಲೂಕಿನ ನೂರಾರು ಮಹಿಳೆಯರ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಹೊಟ್ಟೆ ನೋವು ಎಂದು ಹೋದವರಿಗೂ ಆಪರೇಶನ್ ಮಾಡಿ, ಅವರಿಂದ ಹಣವನ್ನೂ ಕೀಳಲಾಯಿತು. ಈ ಕುರಿತು ನ್ಯಾಯ ದೊರಕಿಸುವಂತೆ ಸುಮಾರು 7-8 ವರ್ಷಗಳಿಂದ ಹೋರಾಟ ಮಾಡಿದರೂ ಈವರೆಗೆ ನ್ಯಾಯ ಸಿಗುತ್ತಿಲ್ಲ.
ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ ಶೆಟ್ಟರ್ ರಾಣೆಬೆನ್ನೂರ ತಾಲೂಕಿನ ಕೆಲ ತಾಂಡಾಗಳಿಗೆ ಭೇಟಿ ನೀಡಿ ಸಂತ್ರಸ್ತ ಮಹಿಳೆಯರೊಂದಿಗೆ ಚರ್ಚಿಸಿದ್ದರು. ನಂತರ ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದರು. ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಅನೇಕ ಹೋರಾಟ, ಪಾದಯಾತ್ರೆ ಮಾಡಲಾಗಿತ್ತು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಭರವಸೆಯೂ ಈಡೇರಲಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದ ಜನಾಂಗಗಳ ದೊಡ್ಡ ಬೆಂಬಲದಿಂದ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರವಾದರೂ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕೊಡಿಸುವಲ್ಲಿ ಮುಂದಡಿ ಇಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷೆ ಲಲಿತಾ ಲಮಾಣಿ, ಹನುಮಂತಪ್ಪ ಕಬ್ಬಾರ, ಶೈಲಾ ರಂಗರಡ್ಡಿ, ಮಂಜವ್ವ ಚೌಡಣ್ಣನವರ, ಗಂಗವ್ವ ರಾಮನಾಯ್ಕ, ಗೀತಾ ನಾಯ್ಕ, ಪಾರವ್ವ, ಪ್ರೇಮಾ ನಾಯ್ಕ, ಇತರರಿದ್ದರು.
ಶಾಸಕರಿಗೆ ಮನವಿ
ಪ್ರತಿಭಟನೆ ನಂತರ ವಿಧಾನಸಭೆ ಉಪ ಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ನಿವಾಸಕ್ಕೆ ತೆರಳಿದ ಪ್ರತಿಭಟನಾಕಾರರು, ಅವರೊಂದಿಗೆ ಚರ್ಚಿಸಿದರು. ಸಮಸ್ಯೆ ಬಗೆಹರಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಬೆಂಗಳೂರು ಚಲೋ ಎಚ್ಚರಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯವರು ಈ ಬಗ್ಗೆ ಚರ್ಚಿಸಿ, ಕೂಡಲೇ ಸಂತ್ರಸ್ತರಿಗೆ ಆರ್ಥಿಕ ನೆರವು ಘೋಷಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ಒಂದು ವೇಳೆ ನಿರ್ಲಕ್ಷಿೃಸಿದರೆ ‘ಬೆಂಗಳೂರು ಚಲೋ’ ಕರೆ ನೀಡಲಾಗುವುದು ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net