ಬೀಜ, ಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲ; ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಆರೋಪ

Published on

ರಾಣೇಬೆನ್ನೂರ: ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದ ರೈತು ಈ ಬಾರಿ ಮುಂಗಾರು ಪ್ರಾರಂಭವಾದ ಹಿನ್ನೆಲೆಯಲ್ಲಿ ತಾಲೂಕಿನ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಾಲೂಕಿನ ರೈತರಿಗೆ ಅಗತ್ಯ ಪ್ರಮಾಣದ ಬೀಜ, ಗೊಬ್ಬರ ಪೂರೈಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಸರಿಯಾದ ಸಮಯಕ್ಕೆ ಬೀಜ, ಗೊಬ್ಬರ ಪೂರೈಸುವಲ್ಲಿ ಹಿನ್ನಡೆಯಾಗಿದೆ. ಈ ಬಾರಿ ಮಾರುಕಟ್ಟೆಯಲ್ಲಿ ಗೊಬ್ಬರ ದರ ಹೆಚ್ಚಾಗಿದೆ. ಆದ್ದರಿಂದ ಸರ್ಕಾರ ಇದನ್ನು ಸಬ್ಸಿಡಿ ಮೂಲಕ ರೈತರಿಗೆ ಹಂಚಿಕೆ ಮಾಡಬೇಕು. ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗುವ ಪ್ರದೇಶ, ಮಳೆ ಮಾಹಿತಿ, ಬೀಜ ಮತ್ತು ರಸಗೊಬ್ಬರ ದಾಸ್ತಾನು ಕುರಿತು ಜಿಲ್ಲಾ ಮತ್ತು ತಾಲೂಕು ಆಡಳಿತ ಸಭೆ ನಡೆಸಬೇಕಾಗಿತ್ತು. ಆದರೆ, ಈವರೆಗೆ ಒಂದು ಸಭೆಯನ್ನೂ ಮಾಡಿಲ್ಲ ಎಂದರು.
ಸರ್ಕಾರ ತನ್ನ ಜವಾಬ್ದಾರಿ ಮರೆತು ಚುನಾವಣೆ ಮಾಡುವಲ್ಲಿ ನಿರತವಾಗಿದ್ದಕ್ಕೆ ಪ್ರಸ್ತುತ ಮುಂಗಾರು ಸಾಕ್ಷಿಯಾಗಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಖುಲ್ಲಾ ಬೀಜಗಳ ಮಾರಾಟ ಎಗ್ಗಿಲ್ಲದೆ ಸಾಗಿದೆ. ಕೆಲವೊಂದು ಅಂಗಡಿಗಳಲ್ಲಿ ಕಂಪನಿ ಕವರ್ ಬಳಸಿ, ಕಳಪೆ ಬೀಜ ಮಾರುತ್ತಿದ್ದಾರೆ. ಕೃಷಿ ಇಲಾಖೆ ವಿಚಕ್ಷಣ ದಳದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಇಂತಹ ಕೃತ್ಯವನ್ನು ತಡೆಗಟ್ಟುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುರಿದ ಮಳೆಯಿಂದ ಮಾರುಕಟ್ಟೆಗೆ ನೀರು ನುಗ್ಗಿ ನೂರಾರು ತರಕಾರಿ ವ್ಯಾಪಾರಸ್ಥರು ನಷ್ಟ ಅನುಭವಿಸಿದ್ದಾರೆ. ನಗರದಲ್ಲಿನ ರಾಜಕಾಲುವೆಗಳು ಕಟ್ಟಿಕೊಂಡಿದ್ದರಿಂದ ಇಂತಹ ಘಟನೆ ನಡೆದಿದೆ. ಆದ್ದರಿಂದ ನಷ್ಟ ಅನುಭವಿಸಿದ ತರಕಾರಿ ವ್ಯಾಪಾರಸ್ಥರಿಗೆ ನಗರಸಭೆ ವತಿಯಿಂದ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವರಾಜ ಬಾರಟಕ್ಕೆ, ರಾಮಣ್ಣ ಹೊನ್ನಾಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net