

ಹಾವೇರಿ: ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು 40 ಕೋಟಿ ಖರ್ಚು ಮಾಡಿದ್ದೇನೆ. ಆದರೂ ನಾನು ಸೋತಿದ್ದೇನೆ. ನನ್ನ ಸೋಲಿಗೆ ನಾನೇ ಕಾರಣ’ ಎಂದು ರಾಣೆಬೆನ್ನೂರ ಮಾಜಿ ಶಾಸಕ ಅರುಣಕುಮಾರ ಪೂಜಾರ ಸ್ವತಃ ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಮಾಜಿ ಶಾಸಕನ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಭಾರತೀಯ ಜನತಾ ಪಾರ್ಟಿಯ ನೂತನ ಜಿಲ್ಲಾಧ್ಯಕ್ಷರಾಗಿ ಅರುಣಕುಮಾರ ಪೂಜಾರ ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ. ಪದಾಧಿಕಾರಿಗಳ ಆಯ್ಕೆ ವೇಳೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣನೆ ಮಾಡಲಾಗಿದೆ ಎಂದು ಕಾರ್ಯಕರ್ತರಿಂದ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಈ ಕುರಿತು ಚರ್ಚಿಸಲು ಸೋಮವಾರ ಸಂಜೆ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಕಾರ್ಯಕರ್ತರಿಂದ ಆಕ್ಷೇಪದ ಮಾತುಗಳನ್ನು ಕೇಳಿಸಿಕೊಂಡ ಬಳಿಕ ಜಿಲ್ಲಾಧ್ಯಕ್ಷ ಪೂಜಾರ ಮಾತನಾಡುವಾಗ ತಮ್ಮ ಸೋಲಿನ ನೋವನ್ನೂ ಬಿಚ್ಚಿಟ್ಟರು. ಈ ವೇಳೆ ಹೇಳಿದ 40 ಕೋಟಿ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇದು ಈಗ ಚರ್ಚೆಯ ವಿಷಯವಾಗಿದೆ.
ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದರಾ ? ಚುನಾವಣೆ ಸಂದರ್ಭದಲ್ಲಿ ಇಷ್ಟೊಂದು ಹಣ ಎಲ್ಲಿಂದ ಬಂತು ? ಯಾರಿಗೆ ಮತ್ತು ಹೇಗೆ ಹಂಚಿಕೆ ಮಾಡಿದರು ? ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿತ್ತಾ ? ಎಂಬ ಹಲವು ಪ್ರಶ್ನೆಗಳು ಉದ್ಭವಿಸಿವೆ. ಚುನಾವಣಾ ಆಯೋಗ ಈ 40 ಕೋಟಿ ಮೂಲ ಪತ್ತೆ ಹಚ್ಚಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ವಿಡಿಯೋದಲ್ಲಿ ಏನೇನಿದೆ ?
ನಾವು ಬಂದಿರುವುದು ಪಕ್ಷವನ್ನು ಕಟ್ಟಬೇಕು. ಮುಂದಿನ ಎಲ್ಲ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂಬುದು ಒಂದೇ ಗುರಿ. ಗೊಂದಲ ಮಾಡಿ, ಗುಂಪುಗಾರಿಕೆ ಮಾಡುವ ಅವಶ್ಯಕತೆ ನನಗಿಲ್ಲ. ಯಾಕಂದರೆ ಗುಂಪುಗಾರಿಕೆ ಆಗಿ ಏನಾಯ್ತು ಪರಿಸ್ಥಿತಿ. ಬಹಳ ಹತ್ತಿರ ಬಂದು ಸೋತಿದ್ದೇನೆ. ನಿಮಗಿಂತ ಹತ್ತು ಪಟ್ಟು ನೋವು ನನ್ನಲ್ಲಿದೆ. ಅಂದೇ ನಾನು ಹೇಳಿದ್ದೆ, ನನ್ನ ಸೋಲಿಗೆ ನಾನೇ ಕಾರಣ. ಯಾವ ಕಾರ್ಯಕರ್ತರೂ ಕಾರಣವಲ್ಲ. ನನ್ನ ಹಣೆಬರಹ ಸರಿಯಿಲ್ಲ. ಯಾರ ಮೇಲೂ ನಾನು ಬೊಟ್ಟು ಮಾಡಲ್ಲ ಎಂದಿದ್ದೇನೆ. ನಾನು 40 ಕೋಟಿ ಖರ್ಚು ಮಾಡಿದ್ದೇನೆ. ನಾನು ಮುಂದೆ ಎಂಎಲ್‌ಎ ಆಗಬೇಕು ಎಂದು ಜಿಲ್ಲಾಧ್ಯಕ್ಷನಾಗಿಲ್ಲ. ನನ್ನ ಕಾರ್ಯಕರ್ತರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಬೇಕೆಂಬ ಗುರಿ ಇದೆ. ನಿಮ್ಮ ಅಳಲನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಾಹೇಬರ ಬಳಿ ಚರ್ಚಿಸಿ ಸರಿಪಡಿಸುವೆ’ ಎಂದು ಮಾಜಿ ಎಂಎಲ್‌ಎ ಅರುಣಕುಮಾರ ಪೂಜಾರ ಹೇಳಿಕೊಂಡಿದ್ದಾರೆ.