ಹೈನುಗಾರಿಕೆಯಿಂದ ರೈತರ ಬದುಕು ಹಸನು; ಡಾ.ನೀಲಕಂಠ ಅಂಗಡಿ ಹೇಳಿಕೆ

6 HVR 5
Published on

ರಾಣೆಬೆನ್ನೂರ: ಹೈನುಗಾರಿಕೆ ರೈತರ ಬದುಕಿಗೆ ವರದಾನವಾಗಿದ್ದು, ಬರಡು ರಾಸುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸುವ ಜತೆಗೆ ವೈಜ್ಞಾನಿಕ ನಿರ್ವಹಣೆಯಿಂದ ಹೈನುಗಾರಿಕೆಯಲ್ಲಿ ಉತ್ತಮ ಲಾಭ ಪಡೆಯಲು ಸಾಧ್ಯವಿದೆ. ಇದರಿಂದ ರೈತರ ಬದುಕು ಹಸನಾಗಲಿದೆ ಎಂದು ಪಶು ಇಲಾಖೆ ಇಲಾಖೆ ಸಹಾಯಕ ನಿರ್ದೇಶಕ ಡಾ.ನೀಲಕಂಠ ಅಂಗಡಿ ಹೇಳಿದರು.
ತಾಲೂಕಿನ ಗುಡ್ಡದ ಬೇವಿನಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಶುಕ್ರವಾರ ಏರ್ಪಡಿಸಿದ್ದ ಜಾನುವಾರುಗಳ ಚಿಕಿತ್ಸಾ ಶಿಬಿರ ಹಾಗೂ ಚರ್ಮಗಂಟು ರೋಗದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚರ್ಮಗಂಟು ರೋಗದಿಂದ ಜಾನುವಾರುಗಳ ಪ್ರಾಣಕ್ಕೆ ಕಂಟಕ ಎದುರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ದನಗಳಿಗೆ ಲಸಿಕೆ ಹಾಕಿಸಬೇಕಿದೆ. ಚರ್ಮಗಂಟು ರೋಗಪೀಡಿತ ಜಾನುವಾರುಗಳಲ್ಲಿ ಹಾಲಿನ ಇಳುವರಿ ಸಹ ಕಡಿಮೆಯಾಗಿ ಹೈನುಗಾರರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ರೋಗ ಹರಡುವುದನ್ನು ತಡೆಗಟ್ಟಲು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ. ರೈತರು ತಮ್ಮ ಎತ್ತುಗಳು ಹಾಗೂ ಹಸುಗಳಿಗೆ ತಪ್ಪದೇ ಲಸಿಕೆ ಹಾಕಿಸುವ ಮೂಲಕ ರೋಗ ಹರಡದಂತೆ ತಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಪಶುವೈದ್ಯಕೀಯ ಪರೀಕ್ಷಕ ಎಚ್.ಆರ್.ನಾಯಕ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಜಯಪ್ಪ ತಳವಾರ, ಮಾದೇವಪ್ಪ ಮಲ್ಲಾಡದ, ಸುಮಲತಾ ತಳವಾರ, ರೇಖಾ ಹುಚಗೊಂಡರ ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net