ಬಿಜೆಪಿಯ ತ್ರಿವೇಣಿ ಪವಾರಗೆ ಭರ್ಜರಿ ಗೆಲುವು; ರಾಣೆಬೆನ್ನೂರ ನಗರಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗ

Triveni Pawar 2
Published on

ರಾಣೆಬೆನ್ನೂರ: ಕಾಂಗ್ರೆಸ್ ಶಾಸಕ ಪ್ರಕಾಶ ಕೋಳಿವಾಡ ಪ್ರತಿನಿಧಿಸುವ ಇಲ್ಲಿನ ನಗರಸಭೆಯ ವಾರ್ಡ್ ಸಂಖ್ಯೆ 22ಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ತ್ರಿವೇಣಿ ನಾರಾಯಣಸಾ ಪವಾರ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಡಿ.27ರಂದು ನಡೆದ ಉಪ ಚುನಾವಣೆ ಮತಗಳ ಎಣಿಕೆ ಶನಿವಾರ ನಡೆದಿತ್ತು. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ತ್ರಿವೇಣಿ ಪವಾರ, ಕಾಂಗ್ರೆಸ್ ಪಕ್ಷದ ಸುರೇಖಾ ಕಂಬಳಿ ಅವರನ್ನು 522 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಒಟ್ಟು ಚಲಾವಣೆಯಾದ ಮತಗಳ ಪೈಕಿ ಬಿಜೆಪಿಯ ತ್ರಿವೇಣಿ ಪವಾರ 872, ಕಾಂಗ್ರೆಸ್ ಪಕ್ಷದ ಸುರೇಖಾ ಕಂಬಳಿ 350, ಜೆಡಿಎಸ್ ಪಕ್ಷದ ಸಂಗೀತಾ ಮಡಿವಾಳರ 69, ಕವಿತಾ ಹುಟ್ಟಿ 113 (ಪಕ್ಷೇತರ), ರೇಖಾ ಬಾರಾಟಕ್ಕೆ 153 (ಪಕ್ಷೇತರ) ಹಾಗೂ ನೋಟಾಕ್ಕೆ 7 ಮತಗಳು ಚಲಾವಣೆಯಾಗಿವೆ.
ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಪುತ್ರ ಪ್ರಕಾಶ ಕೋಳಿವಾಡ ರಾಣೆಬೆನ್ನೂರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಬಿಜೆಪಿಯ ನಗರಸಭೆ ಸದಸ್ಯೆ ಉಷಾ ಚಿನ್ನಿಕಟ್ಟಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಜಿದ್ದಾಜಿದ್ದು ಏರ್ಪಟ್ಟಿದ್ದರೂ ತನ್ನ ಕ್ಷೇತ್ರವನ್ನು ಮರಳಿ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಕೇಸರಿ ಪಡೆಯ ವಿಜಯೋತ್ಸವ
ಪಕ್ಷದ ಅಭ್ಯರ್ಥಿ ತ್ರಿವೇಣಿ ಪವಾರ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರು ಪರಸ್ಪರ ಗುಲಾಲು ಎರಚಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಮಾಜಿ ಶಾಸಕ ಅರುಣಕುಮಾರ ಪೂಜಾರ, ಬಿಜೆಪಿ ಶಹರ ಘಟಕದ ಅಧ್ಯಕ್ಷ ದೀಪಕ ಹರಪನಹಳ್ಳಿ, ನಗರಸಭೆ ಸದಸ್ಯರಾದ ನಾಗರಾಜ ಪವಾರ, ಮಲ್ಲಿಕಾರ್ಜುನ ಅಂಗಡಿ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ಪ್ರಭಾವತಿ ತಿಳವಳ್ಳಿ, ಪ್ರಕಾಶ ಪೂಜಾರ, ಪ್ರಕಾಶ ಬುರಡಿಕಟ್ಟಿ, ನಾಗರಾಜ ಅಡ್ಮನಿ, ಹನುಮಂತಪ್ಪ ಹೆದ್ದೇರಿ, ಎಪಿಎಂಸಿ ಮಾಜಿ ಸದಸ್ಯ ಪರಮೇಶ ಗೂಳಣ್ಣನವರ, ಅನಿಲ ಸಿದ್ದಾಳಿ, ಶಿವಯೋಗಿ ಹಳ್ಳಳ್ಳಿ, ರಮೇಶ ಗುತ್ತಲ, ಮೈಲಪ್ಪ ಗೋಣಿಬಸಮ್ಮನವರ, ಚಂದ್ರಶೇಖರ ಕುಂದಾಪುರ, ಶಿವಕುಮಾರ ಹಾರ್ಕನಾಳ, ಸಂತೋಷ ತೇವರಿ, ಲಿಂಗನಗೌಡ ಪಾಟೀಲ, ಶೇಖಪ್ಪ ನರಸಗೊಂಡರ, ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net