

ರಾಣಿಬೆನ್ನೂರ: ಡಿವೈಡ್‌ರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ನಗರದ ಹಳೆ ಪಿ.ಬಿ.ರಸ್ತೆ ಕಮಲಾ ನಗರ 5ನೇ ಕ್ರಾಸ್ ಬಳಿ ಸಂಭವಿಸಿದೆ.
ಇಲ್ಲಿನ ವಿಕಾಸ ನಗರದ ನಿವಾಸಿ ವೈಭವ ರಾಜೇಂದ್ರ ಪಟ್ಟಣಶೆಟ್ಟಿ (22), ಲೋಕೋಪಯೋಗಿ ವಸತಿ ಗೃಹದ ನಿವಾಸಿ ನಂದನ ಕುಮಾರ ಶಿವಪ್ಪನವರ (22) ಮೃತ ಯುವಕರು. ತಡರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಅವಘಡ ಸಂಭವಿಸಿದೆ ಎನ್ನಲಾಗಿದೆ.
ವೈಭವ ಬಜಾಜ್ ಪಲ್ಸರ್ ಬೈಕ್ ಹಿಂಬದಿಯಲ್ಲಿ ಸ್ನೇಹಿತ ನಂದನ ಎಂಬಾತನನ್ನು ಕೂರಿಸಿಕೊಂಡು ಮಾಗೋಡ ಕ್ರಾಸ್ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ ಅತೀ ಜೋರಾಗಿ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ವೈಭವ ಡಿವೈಡರ್‌ದಲ್ಲಿದ್ದ ಲೈಟಿನ ಕಂಬಕ್ಕೆ ರಭಸದಿಂದ ಅಪ್ಪಳಿಸಿದ್ದರಿಂದ ಹಾಗೂ ಹಿಂಬದಿ ಸವಾರ ನಂದನ ಬೈಕ್‌ನಿಂದ ಪುಟಿದು ನೆಲಕ್ಕೆ ಜೋರಾಗಿ ಬಿದ್ದ ಕಾರಣ ಇಬ್ಬರೂ ಸ್ಥಳದಲ್ಲಿಯೇ ಮರಣ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.