

ರಾಣೆಬೆನ್ನೂರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48 ಹೂಲಿಹಳ್ಳಿ-ಕೂನಬೇವು ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ (ಮೆಗಾ ಮಾರುಕಟ್ಟೆ)ಯಲ್ಲಿ ನಿರ್ಮಿಸಿರುವ ರೈತ ಭವನಕ್ಕೆ ಸೋಮವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲಿಸಿದರು.
220 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಯಾಗಿರುವ ಮಾರುಕಟ್ಟೆ ಪ್ರಾಂಗಣ 518 ನಿವೇಶನಗಳನ್ನು ಹೊಂದಿದೆ. ಮಾರುಕಟ್ಟೆಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಮೆಗಾ ಮಾರುಕಟ್ಟೆಯು ಸುಸಜ್ಜಿತವಾದ ಆಡಳಿತ ಕಚೇರಿ, ವ್ಯವಸ್ಥಿತವಾದ ಟೆಂಡರ್ ಹಾಲ್, ರೈತ ಭವನ, ಅತಿಥಿ ಗೃಹ, ಸುಸಜ್ಜಿತವಾದ ಟ್ರಕ್ ಟರ್ಮಿನಲ್, ಕ್ಯಾಂಟೀನ್, ಶೌಚಗೃಹಗಳು, ಓವರ್ ಹೆಡ್ ಟ್ಯಾಂಕ್‌ಗಳು, ಹರಾಜುಕಟ್ಟೆ, ಆಹಾರ ಮಳಿಗೆ, ಒಳಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ಘನ ತ್ಯಾಜ್ಯ ವಿಲೇವಾರಿ, ಗೋದಾಮುಗಳನ್ನು ಒಳಗೊಂಡಿದೆ. ಹಾಗೆಯೇ ಸಂಸ್ಕರಣ ಘಟಕಗಳ ನಿರ್ಮಾಣಕ್ಕೆ ತಲಾ 1 ಎಕರೆ ಜಾಗದಂತೆ ಒಟ್ಟು 12 ಎಕರೆ ಮೀಸಲು ಇರಿಸಲಾಗಿದೆ. ಒಂದೂವರೆ ಎಕರೆ ವಿಸ್ತೀರ್ಣದ ನಿವೇಶನ, ಶಿಥಿಲ ಘಟಕಗಳ ನಿರ್ಮಾಣಕ್ಕೆ ಮೀಸಲಿರಿಸಲಾಗಿದೆ. ವರ್ತಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಡಿಸಿ ವಿವರಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಶೈಲಜಾ, ಮಾರುಕಟ್ಟೆ ಸಿಬ್ಬಂದಿ, ಇತರರು ಇದ್ದರು.