

ರಾಣೆಬೆನ್ನೂರ: ಮಹಾತ್ಮರು ಪರಮಾತ್ಮನನ್ನು ತಮ್ಮಲ್ಲಿ ಲೀನ ಮಾಡಿಕೊಂಡಿದ್ದು, ಅವರನ್ನು ಆರಾಧನೆ ಮಾಡುವ ಮೂಲಕ ಮುಕ್ತಿ ಕಾಣಬೇಕಾಗಿದೆ ಎಂದು ಚಿಕ್ಕೋಡಿಯ ಜೋಡಕುರಳಿಯ ಶ್ರೀ ಚಿದಾನಂದ ಭಾರತಿ ಸ್ವಾಮೀಜಿ ನುಡಿದರು.
ತಾಲೂಕಿನ ಐರಣಿ ಹೊಳೆಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಗುರು ಮುಪ್ಪಿನಾರ್ಯ ಸ್ವಾಮೀಜಿಯವರ ಪುಣ್ಯಾರಾಧನೆ, ಬಸವರಾಜ ದೇಶಿಕೇಂದ್ರ ಸ್ವಾಮೀಜಿಯ ಅಂಬಾರಿ ಉತ್ಸವ, ತುಲಾಭಾರ, ರಥೋತ್ಸವ, ಧರ್ಮಸಭೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಹಾತ್ಮರು ಎಂದೂ ಹುಟ್ಟುವುದಿಲ್ಲ. ಎಂದೂ ಸಾಯುವುದಿಲ್ಲ. ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಅನೇಕ ಮಹಾತ್ಮರ ವಚನಗಳನ್ನು ನೆನೆಯುತ್ತಿದ್ದೇವೆ. ಹೀಗಾಗಿ, ಮಹಾತ್ಮರು ಎಂದಿಗೂ ಸತ್ತಿಲ್ಲ. ನಾವು ಇದ್ದು ಸತ್ತ ಹಾಗೆ. ಹೀಗಾಗಿ, ಮಹಾತ್ಮರ ಆರಾಧನೆ ಮಾಡಬೇಕಾಗಿದೆ. ಸಿದ್ದಾರೂಢರು ಅವತಾರ ಎತ್ತಿ, ಕೆಟ್ಟ ಬುದ್ದಿಯನ್ನು ಸುಟ್ಟರು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ, ಶ್ರೀಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಕುಳ್ಳೂರು ಗುರು ಶಿವಯೋಗಿಶ್ವರ ಮಠದ ಬಸವಾನಂದ ಭಾರತಿ ಸ್ವಾಮೀಜಿ, ಹದಡಿ ಚಂದ್ರಗಿರಿಮಠದ ಮುರಳಿಧರ ಸ್ವಾಮೀಜಿ, ಜಡೆ ಸಿದ್ದೇಶ್ವರ ಆಶ್ರಮದ ಶಿವಾನಂದ ಸ್ವಾಮೀಜಿ, ಬಾಲಯೋಗಿ ಸಿದ್ದಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹರಿಹರದ ವಿವೇಕಾನಂದ ಸ್ವಾಮೀಜಿ, ಹುಬ್ಬಳ್ಳಿಯ ಸಿದ್ದಾರೂಢಮಠದ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ, ಧರ್ಮದರ್ಶಿ ಸಿದ್ದನಗೌಡ ಪಾಟೀಲ, ಬಾಬಣ್ಣ ಶೆಟ್ಟರ, ಮತ್ತಿತರರಿದ್ದರು.