

ಹಾವೇರಿ: ರಾಜ್ಯಾದ್ಯಂತ ರಾಮಭಕ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಈ ಕೂಡಲೇ ನಿಲ್ಲಿಸಬೇಕು. ಹುಬ್ಬಳ್ಳಿಯಲ್ಲಿ ಬಂಧನಕ್ಕೆ ಒಳಗಾಗಿರುವ ಕರಸೇವಕ ಶ್ರೀಕಾಂತ ಪೂಜಾರ ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಡಿಸೆಂಬರ್ 6, 1992ರಂದು ನಡೆದ ಬಾಬರಿ ಮಸೀದಿ ಕಟ್ಟಡ ದ್ವಂಸ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕಾಗಿ ಸುಮಾರು 32 ವರ್ಷಗಳ ಹಿಂದಿನ ಪ್ರಕರಣವನ್ನು ಕೆದಿಕಿ ಹಿಂದು ಕಾರ್ಯಕರ್ತ ಶ್ರೀಕಾಂತ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಹಿಂದುಗಳೇ ಕರ್ನಾಟಕದಲ್ಲಿ ನಿಮಗೆ ಧ್ವನಿ ಎತ್ತುವ ಹಕ್ಕಿಲ್ಲ ಎಂಬ ಸಂದೇಶವನ್ನು ರವಾನಿಸಲು ಕಾಂಗ್ರೆಸ್ ಸರ್ಕಾರ ಹೊಂಚು ಹಾಕಿದೆ. ಆದರೆ, ಇದರಲ್ಲೂ ವಿಫಲವಾಗುವುದು ಖಚಿತ ಎಂದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಜೈ ಶ್ರೀರಾಮ್ ಎಂದು ಕೂಗುವ ಹಿಂದು ಕಾರ್ಯಕರ್ತರ ಧ್ವನಿ ಕುಗ್ಗಿಸುವ ಪ್ರಯತ್ನವನ್ನು ಸಿದ್ದರಾಮಯ್ಯನ ಸರ್ಕಾರ ಮಾಡುತ್ತಿದೆ. ಒಬ್ಬ ಶ್ರೀಕಾಂತ ಪೂಜಾರಿಯನ್ನು ಬಂಧಿಸಿದರೆ ರಾಜ್ಯಾದ್ಯಂತ ಮನೆಮನೆಗೊಬ್ಬ ಪೂಜಾರಿಯ ನಿರ್ಮಾಣವಾಗುತ್ತದೆ ಎಂದರು.
ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಗಳನ್ನು ಮತ್ತು ಕೊಟ್ಟ ಮಾತುಗಳನ್ನ ನೆರವೇರಿಸಲು ಸಾಧ್ಯವಾಗದೇ ಇರುವುದನ್ನು ಮುಚ್ಚಿ ಹಾಕಲು, ಜನರ ದೃಷ್ಟಿಯನ್ನು ಬೇರೆಡೆಗೆ ಸೆಳೆಯಲು ಈ ರೀತಿ ಒಂದಲ್ಲ ಒಂದು ಕುತಂತ್ರಗಳನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.
ಕೆ.ಶಿವಲಿಂಗಪ್ಪ ಮಾತನಾಡಿ, ಸಿದ್ದರಾಮಯ್ಯ ಹಾಗೂ ಜಿ.ಪರಮೇಶ್ವರ ಇಬ್ಬರೂ ದೇವರ ಹೆಸರಿಟ್ಟುಕೊಂಡು ದೇವರ ಕೋಣೆಯಲ್ಲಿ ಗಲೀಜು ಮಾಡುವ ಮನಸ್ಥಿತಿ ಹೊಂದಿದ್ದಾರೆ. ಸ್ವತಃ ವಕೀಲರಾಗಿರುವ ಸಿದ್ದರಾಮಯ್ಯ ಅವರಿಗೆ ಕಾನೂನಿನ ಜ್ಞಾನ ಮರೆತಂತಿದೆ ಎಂದರು.
ಪ್ರತಿಭಟನೆಯಲ್ಲಿ ಭೋಜರಾಜ ಕರೂದಿ, ಪಾಲಾಕ್ಷಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರುದ್ರೇಶ ಚಿನ್ನಣ್ಣನವರ, ಕೃಷ್ಣಾ ಈಳಗೇರ, ಶಶಿಧರ ಹೊಸಳ್ಳಿ, ಡಾ.ಸಂತೋಷ ಆಲದಕಟ್ಟಿ, ಡಿ.ಎಸ್.ಮಾಳಗಿ, ಮಂಜುನಾಥ ಮಡಿವಾಳರ, ಶಿವಾನಂದ ಮ್ಯಾಗೇರಿ, ಕರಬಸಪ್ಪ ಹಳದೂರ, ಅಜಯ ಮಠದ, ವಿಜಯಕುಮಾರ ಹೊಳಲ, ಮತ್ತಿತರರು ಪಾಲ್ಗೊಂಡಿದ್ದರು.