

ಹಾವೇರಿ: ಮಣಿಪುರ ರಾಜ್ಯದಲ್ಲಿ ಹಿಂಸಾಚಾರ, ಅತ್ಯಾಚಾರ ಪ್ರಕರಣ, ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಹಾಗೂ ಗಲಭೆ ನಿಯಂತ್ರಿಸುವಲ್ಲಿ ವೈಫಲ್ಯ ಹೊಂದಿರುವ ಮಣಿಪುರ ರಾಜ್ಯ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಳೆದು ಎರಡು ತಿಂಗಳಿಂದ ಮಣಿಪುರದಲ್ಲಿ ಹಿಂಸಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಇದನ್ನು ಹತ್ತಿಕ್ಕುವಲ್ಲಿ ಕೇಂದ್ರ ಹಾಗೂ ಮಣಿಪುರ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲಗೊಂಡಿವೆ. ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ ಅವರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಬರ್ಬರವಾಗಿ ಕೊಲೆಗೈದಿರುವ ಪ್ರಕರಣವು ಇಡಿ ದೇಶವೇ ತಲೆ ತಗ್ಗಿಸುವ ಸಂಗತಿಯಾಗಿದೆ. ಗಲಭೆ ನಿಯಂತ್ರಿಸಲು ಈಗಾಗಲೇ ಉಚ್ಛ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಹೀಗಿದ್ದರೂ ಗಲಭೆ ನಿಯಂತ್ರಣಗೊಂಡಿಲ್ಲ. ಹಾಗಾಗಿ, ರಾಷ್ಟ್ರಪತಿಯವರು ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವಂತೆ ಒತ್ತಾಯಿಸಿದರು.
ಬಳಿಕ ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸೇನೆ ಜಿಲ್ಲಾಧ್ಯಕ್ಷ ರಾಮು ತಳವಾರ, ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಸುವರ್ಣಮ್ಮ, ಜಿಲ್ಲಾ ಗೌರವಾಧ್ಯಕ್ಷ ಎಂ.ಕೆ.ತಿಮ್ಮಾಪುರ, ಜಿಲ್ಲಾ ಮಹಿಳಾ ಗೌರವಾಧ್ಯಕ್ಷೆ ಗೀತಾ ಆರ್.ಸಿಂಗ್, ಶಿವರಾಜ ಕಾಡಮ್ಮನವರ, ತಾಲೂಕು ಘಟಕದ ಅಧ್ಯಕ್ಷ ಪ್ರವೀಣ ಕಾಗದ, ಸುಮಾ ಪುರದ, ಪ್ರಕಾಶ ಗೋಣೆಮ್ಮನವರ, ಭರಮಪ್ಪ ದೊಡ್ಡಮನಿ, ಜಿ.ಎಸ್.ಪಾಟೀಲ, ಮಂಜುನಾಥ ದಾನಪ್ಪನವರ, ವೀರೇಶ ಹಡಪದ, ಪ್ರೇಮಾ ಮುದಿಗೌಡ್ರ, ಶಿವಪ್ಪ ಬಳಲಕೊಪ್ಪ, ಮಂಜಮ್ಮ ಕುರಬಗೇರಿ, ಇತರರಿದ್ದರು.