

ಹಾವೇರಿ: ಬರಗಾಲ ಘೋಷಣೆಗೆ ಮೀನಮೇಷ ಎಣಿಸುತ್ತಿರುವ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರೈತರ ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಬರಗಾಲ ಘೋಷಣೆ ಮಾಡಲು ಮೀನಮೇಷ ಎಣಿಸುತ್ತಿದೆ. ಪುಟಗೋಸಿ ಪರಿಹಾರ ನಮಗೆ ಬೇಕಿಲ್ಲ.
ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ನಮ್ಮ ಜಿಲ್ಲೆಯ ಶಾಸಕರಾದ ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ ಮಾತಿಗೆ ಅಡ್ಡಿ ಪಡಿಸಿದರು. ಇಂಥವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ ಎಂದು ವಾಗ್ದಾಳಿ ಮಾಡಿದರು.
ಸಿಎಂ ಜಿಲ್ಲೆಗೆ ಬಂದರು, ಹೋದರು. ಇದರಿಂದ ರೈತರಿಗೆ ಆದ ಲಾಭವೇನು? ಶಿವಾನಂದ ಪಾಟೀಲರು ಜಿಲ್ಲಾ ಉಸ್ತುವಾರಿ ಆಗಲು ಲಾಯಕ್ಕಿಲ್ಲ. ನಮ್ಮ ಜಿಲ್ಲೆಯ ಐವರು ಶಾಸಕರಲ್ಲೇ ಒಬ್ಬರು ಸಚಿವರಾಗಲಿ ಎಂದರು.
ಜಾತಿ ಆಧಾರಿತವಾಗಿ ದೇಶ ನಡೆಯುವುದಿಲ್ಲ. ದುಡಿಮೆ ಆಧಾರಿತವಾಗಿ ದೇಶ ನಡೆಯುತ್ತದೆ. ₹140 ಕೋಟಿ ಜನರ ಹಸಿವನ್ನು ನೀಗಿಸಿರುವುದು ರೈತರು.
ಯಾರಾದರೂ ರೈತರ ಬಗ್ಗೆ ಹಗುರವಾಗಿ ಮಾತನಾಡಿದರೆ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ, ಹುಷಾರ್ ಎಂದು ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಸಂಚಾಲಕ ಮಹಮ್ಮದಗೌಸ್ ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಶಿವಬಸಪ್ಪ ಗೋವಿ, ಮರಿಗೌಡ ಪಾಟೀಲ, ಮತ್ತಿತರರು ಪಾಲ್ಗೊಂಡಿದ್ದರು.