

ಹಾವೇರಿ: ಕಾಳು ಮಾಡುವ ಯಂತ್ರಗಳಿಗೆ ಚೆಸ್ಸಿ ನಂಬರ್ ಕೊಡುವುದು, ಹೋಬಳಿ ಮಟ್ಟದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಟ್ರ್ಯಾಕ್ಟರ್ ರ‌್ಯಾಲಿ ನಡೆಸಲಾಯಿತು.
ನಗರದ ಕಾಗಿನೆಲೆ ರಸ್ತೆಯಲ್ಲಿರುವ ಶ್ರೀ ಮುರುಘರಾಜೇಂದ್ರ ಮಠದಿಂದ ಆರಂಭವಾದ ಮೆರವಣಿಗೆಯಲ್ಲಿ ರೈತರು ಟ್ರ್ಯಾಕ್ಟರ್, ಕಾಳು ಬೇರ್ಪಡಿಸುವ ಯಂತ್ರಗಳ ಮೂಲಕ ಪಾಲ್ಗೊಂಡಿದ್ದರು. ಹೊಸಮನಿ ಸಿದ್ದಪ್ಪ ವೃತ್ತ, ಪಿ.ಬಿ ರಸ್ತೆ, ಇಜಾರಿಲಕಮಾಪುರ ಮಾರ್ಗವಾಗಿ ಸಂಚರಿಸಿದ ರ‌್ಯಾಲಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ರ‌್ಯಾಲಿಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ಜಿಲ್ಲೆಯಲ್ಲಿ ಮೆಕ್ಕೆಜೋಳ, ಶೇಂಗಾ, ಸೋಯಾಬೀನ್, ಇತರ ಬೆಳೆಗಳ ಕಾಳು ಮಾಡುವ ಯಂತ್ರಗಳಿಂದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಕಾಳು ಬೇರ್ಪಡಿಸುವ ಯಂತ್ರದಲ್ಲಿ ಕೆಲವು ರೈತರು ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಕೈ ಕಾಲು ಕಳೆದುಕೊಂಡಿದ್ದಾರೆ. ಅಂಥವರ ಪರಿಸ್ಥಿತಿ ಶೋಚನೀಯವಾಗಿದೆ. ಹಾಗಾಗಿ, ಕಾಳು ಮಾಡುವ ಯಂತ್ರಗಳ ಟ್ರಾೃಲಿ, ಚೆಸ್ಸಿಗಳಿಗೆ ಆರ್‌ಟಿಒ ಅಧಿಕಾರಿಗಳು ಚೆಸ್ಸಿ ನಂಬರ್ ಕೊಡಬೇಕು. ಆರ್‌ಟಿಒ ಕಚೇರಿಗಳಲ್ಲಿ ರೈತರ ಕೃಷಿ ಸಂಬಂಧಿತ ಟ್ರ್ಯಾಕ್ಟರ್, ಬೈಕ್, ಟಾಟಾ ಏಸ್, ಮಷಿನ್‌ನಂತಹ ಯಂತ್ರಗಳಿಗೆ ಸರ್ಕಾರದ ನಿಗದಿತ ಶುಲ್ಕ ಪಡೆದು ಲೈಸೆನ್ಸ್ ಕೊಡಬೇಕು. ರೈತರಿಗೆ ಮಾರಕವಾದ ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿದರು. ಜತೆಗೆ ಬೇಡ್ತಿ-ವರದಾ ನದಿ ಜೋಡಣೆ ಅನುಷ್ಠಾನ, ಅತಿವೃಷ್ಠಿ ಬೆಳೆಹಾನಿ ಪರಿಹಾರ, ರೈತ ಸಾಲಮನ್ನಾ, ಹೋಬಳಿ ಮಟ್ಟದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಹೀಗೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ರೈತ ಮುಖಂಡರಾದ ಭಕ್ತರಹಳ್ಳಿ ಭೈರೇಗೌಡ್ರ, ಕಲ್ಮೇಶ ಲಿಂಗಾಡಿ, ರಾಘವೇಂದ್ರ ನಾಯಕ, ಬಸವರಾಜ ಟಿ.ಡಿ. ಮಾತನಾಡಿದರು. ರುದ್ರಪ್ಪ ಬಳಿಗಾರ, ರಮೇಶ ದೊಡ್ಡೂರ, ಬಸಯ್ಯ ಹಿರೇಮಠ, ಮಂಜಣ್ಣ ಕಂಕಣವಾಡ, ಚನ್ನಬಸಪ್ಪ ಹಾವಣಗಿ, ಆನಂದ ಕೆಳಗಿನಮನಿ, ಶಿವನಗೌಡ ಗಾಜೀಗೌಡ್ರ, ಶ್ರೀನಿವಾಸ ಚಿಕ್ಕನಗೌಡ್ರ, ಗಿರಿಧರಗೌಡ ಪಾಟೀಲ, ಅನೀಲ ಡೊಳ್ಳಿನ, ಚಂದ್ರು ಬಂಕಾಪುರ, ನಾಗರಾಜ ರಿತ್ತಿಕುರುಬರ, ಮಾರ್ತಾಂಡಪ್ಪ ನೆಗಳೂರ, ರಾಮಣ್ಣ ಲಮಾಣಿ, ದೇವರಾಜ ದೊಡ್ಡಮನಿ, ನಾಗರಾಜ ನೆಲ್ಲೂರ, ಶೋಭಾ ಬೆಳಗಾವಿ, ಸೇರಿದಂತೆ, ಇತರರು ಭಾಗವಹಿಸಿದ್ದರು.
16 ಕೋಟಿ ಪರಿಹಾರ ಬಿಡುಗಡೆ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ರೈತರ ಹವಾಲು ಆಲಿಸಿ ಮನವಿ ಸ್ವೀಕರಿಸಿ ಮಾತನಾಡಿದರು. ಬೇಡ್ತಿ- ವರದಾ ನದಿ ಜೋಡಣೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗುವಂಥದ್ದು. ಸರ್ಕಾರದ ಗಮನಕ್ಕೆ ತರಲಾಗುವುದು. ಅತಿವೃಷ್ಠಿ ಮಳೆಯಿಂದ ಜಿಲ್ಲೆಯಲ್ಲಿ 18,871 ಹೆಕ್ಟೇರ್ ಹಾನಿ ಸಂಭವಿಸಿದ್ದರ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗಿದೆ. ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ 40,544 ರೈತರಿಗೆ 16.68 ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ರೈತರ ಖಾತೆಗೆ ಜಮೆಯಾಗಲಿದೆ. ಮಾವು ಹಾಗೂ ಅಡಕೆ ವಿಮೆಗೆ ಪರಿಹಾರ ಬಂದಿದ್ದು, ಜಮೆಯಾಗುತ್ತಿದೆ ಎಂದು ವಿವರಿಸಿದರು.
ರೈತರೊಂದಿಗೆ ಚೆಲ್ಲಾಟ ಆಡದಿರಿ
ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ಸರ್ಕಾರ ರೈತರೊಂದಿಗೆ ಚೆಲ್ಲಾಟ ಆಡದೇ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿ, ಪ್ರಧಾನಮಂತ್ರಿಯವರಿಗೆ ಪತ್ರ ಬರೆದರೆ ಏನೂ ಪ್ರಯೋಜನವಾಗಲ್ಲ. ರಾಜ್ಯಕ್ಕೆ ಬರಬೇಕಾದ ಹಣವನ್ನು ಕೇಂದ್ರದ ಬಳಿ ಹೋಗಿ ಜಗಳ ಮಾಡಿ ಮಂಜೂರು ಮಾಡಿಸಿಕೊಂಡು ಬರಬೇಕು. ಕಾರ್ಖಾನೆಗಳು ಆರಂಭವಾಗಿದ್ದು, ಕಬ್ಬಿಗೆ ದರ ನಿಗದಿ ಘೋಷಣೆ ಆಗಬೇಕು. 2013ರಲ್ಲಿ ರೈತರಿಗೆ ನೀಡಿದಂತೆ ಈ ಬಾರಿಯೂ 3,200 ರೂ. ಜತೆಗೆ 350 ರೂ. ಸೇರಿಸಿ 3,550 ರೂ. ಕೊಡಬೇಕೆಂದು ಒತ್ತಾಯಿಸಿದರು.