ರಾಜ್ಯ ರೈತ ಸಂಘದಿಂದ ಪ್ರತಿಭಟನೆ 24ರಂದು; ಬಜೆಟ್‌ನಲ್ಲಿ ಬೇಡ್ತಿ- ವರದಾ ನದಿ ಜೋಡಣೆ ಅನುಮೋದನೆಗೆ ಆಗ್ರಹ

raita sangha pressmeet
Published on

ಹಾವೇರಿ: ಶುಂಠಿ ಬೆಳೆಯನ್ನು ಕ್ವಿಂಟಲ್‌ಗೆ 10 ಸಾವಿರ ರೂ. ಬೆಂಬಲ ಬೆಲೆಗೆ ಖರೀದಿಸುವುದು, ಬೇಡ್ತಿ-ವರದಾ ನದಿ ಜೋಡಣೆ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡುವುದು, ಬಾಕಿ ಬೆಳೆ ವಿಮಾ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.24ರಂದು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಂತರ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಶಾಶ್ವತ ಬರಗಾಲದಿಂದ ಮುಕ್ತಿ ಹೊಂದಬೇಕಾದರೆ ಬೇಡ್ತಿ-ವರದಾ ನದಿ ಜೋಡಣೆ ಅವಶ್ಯವಿದೆ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಒಲವು ತೋರಿದ್ದಾರೆ. ಹಾಗಾಗಿ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರ ನೀರಾವರಿ ಬೆಳೆಗಳು ಒಣಗುತ್ತಿವೆ. ಕಳಪೆ ಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿದ್ದು, ಕನಿಷ್ಠ 7 ತಾಸು ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಲಾಗುವುದು. ರೈತರ ಟಿ.ಸಿ ಹಾಗೂ ಗ್ರಿಡ್‌ಗಳನ್ನು ಅಪ್‌ಗ್ರೇಡ್ ಮಾಡುವುದು, ಅಕ್ರಮ ಸಕ್ರಮ ಯೋಜನೆಯಡಿ ಕಂಬ ವೈಯರ್, ಟಿ.ಸಿ ಕೊಡುವ ವ್ಯವಸ್ಥೆ ಮಾಡಿಸುವಂತೆ ಒತ್ತಾಯಿಸಲಾಗುತ್ತದೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಳೆದ ಮುಂಗಾರಿನಲ್ಲಿ ಮಧ್ಯಂತರ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ 90 ಕೋಟಿ ಪರಿಹಾರದ ಬದಲಾಗಿ ಕೇವಲ 9.66 ಕೋಟಿ ಮಾತ್ರ ಬಿಡುಗಡೆಯಾಗಿದೆ. ವಿಮಾ ಕಂತು ತುಂಬಿಸಿಕೊಳ್ಳುವಾಗ ಒಂದು ಆದೇಶ ಇದ್ದರೆ, ಕಂತು ತುಂಬಿದ ಬಳಿಕ ಇನ್ಸುರೆನ್ಸ್ ಕಂಪನಿಯವರು ಒಂದು ವರ್ಷದ ಹಿಂದಿನ ತಾರೀಕಿನಿಂದ ಪೂರ್ವಾನ್ವಯವಾಗುವಂತೆ ಆದೇಶ ಮಾಡಿದ್ದಾರೆ. ವಿಮೆಯಲ್ಲಿ ಸಾಕಷ್ಟು ಲೋಪಗಳಾಗಿದ್ದು, ಮರುಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಡಿಸಿಸಿ ಬ್ಯಾಂಕ್‌ಗೆ ಪರ್ಯಾಯವಾಗಿ ಪ್ರಾದೇಶಿಕ ಕಚೇರಿಯನ್ನು ಧಾರವಾಡದ ಕೆಸಿಸಿ ಕಚೇರಿಯಲ್ಲಿ ನಾಮಕಾ ವಾಸ್ತೆ ಎಂಬಂತೆ ತೆರೆಯಲಾಗಿದೆ. ಈ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ರವಿ ಅಂಗಡಿ, ಯಶವಂತ ಯಡಗೋಡಿ ಇತರರಿದ್ದರು.

ವಿವಿ ಮುಚ್ಚುವುದಕ್ಕೆ ರೈತರ ವಿರೋಧ

ಹಾವೇರಿ ವಿವಿ ಮುಚ್ಚುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿರುವುದಕ್ಕೆ ರೈತ ಸಂಘಟನೆಗಳ ವಿರೋಧವಿದೆ. ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯಲಿಕ್ಕೆ ಹಾವೇರಿ ವಿಶ್ವವಿದ್ಯಾಲಯ ಸಹಕಾರಿಯಾಗಿದೆ. ಸರ್ಕಾರ ಯಾವುದೇ ವಿವಿಗಳನ್ನು ಮುಚ್ಚಬಾರದು. ಅಗತ್ಯ ಅನುದಾನ ಕೊಟ್ಟು ಅಭಿವೃದ್ಧಿ ಮಾಡಬೇಕು ಎಂದು ರೈತ ಸಂಘದ ಉಪಾಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಎಚ್.ಎಚ್ ಮುಲ್ಲಾ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net