

ಹಾವೇರಿ: ಬೇಡ್ತಿ- ವರದಾ ನದಿ ಜೋಡಣೆ, ನಬಾರ್ಡ್‌ನಿಂದ ಸಾಲ ಸೌಲಭ್ಯ ಒದಗಿಸುವುದು, ಬೆಳೆಹಾನಿ ಪರಿಹಾರ, ಬಾಕಿ ಬೆಳೆ ವಿಮೆ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಡಿ.7ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1992ರಲ್ಲಿ ಯೋಜಿಸಲಾದ ಬೇಡ್ತಿ- ವರದಾ ನದಿ ಜೋಡಣೆ ಕಾಮಗಾರಿಯನ್ನು ಆರಂಭಿಸಬೇಕು. ಈ ಮೊದಲಿನಂತೆ ನಬಾರ್ಡ್‌ನಿಂದ ನೀಡುವ ಸಾಲ ಸೌಲಭ್ಯವನ್ನು ಒದಗಿಸಬೇಕು. ಹಾವೇರಿ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಆರಂಭಿಸಬೇಕು. 33 ಗ್ರಾಮ ಪಂಚಾಯಿತಿಗಳಲ್ಲಿ ಬಾಕಿ ಇರುವ ಬೆಳೆ ವಿಮೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ವರ್ಷದ ವಿಮೆಗಾಗಿ ಜಿಲ್ಲೆಯಲ್ಲಿ ಒಟ್ಟು 76 ಸಾವಿರ ಅರ್ಜಿ ಸಲ್ಲಿಸಲಾಗಿದ್ದು, ಸಮರ್ಪಕವಾಗಿ ರೈತರಿಗೆ ವಿಮೆ ಜಮೆ ಮಾಡಬೇಕು. ಸೆಪ್ಟೆಂಬರ್ 2023ರಿಂದ ಹೆಸ್ಕಾಂನಿಂದ ಹೊಸ ಬೋರ್‌ವೆಲ್ ಸಂಪರ್ಕ ಕೊಡುತ್ತಿಲ್ಲ. ಇದರಿಂದ ವಿದ್ಯುತ್ ಓವರ್ ಲೋಡ್ ಆಗಿ ಟಿಸಿಗಳು ಸುಡುತ್ತಿವೆ. ಇದರಿಂದ ರೈತರ ಬೆಳೆ ಹಾಳಾಗುತ್ತಿವೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಹಗಲು- ರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸುತ್ತೇವೆ. ಪ್ರತಿದಿನ ಒಂದೊಂದು ತಾಲೂಕಿನ ರೈತರು ಭಾಗವಹಿಸಲಿದ್ದಾರೆ. ಯಾವುದೇ ಕಾರಣಕ್ಕೂ ನ್ಯಾಯ ಸಿಗುವವರೆಗೂ ಧರಣಿ ಕೈಬಿಡಲ್ಲ.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಗೌರವಾಧ್ಯಕ್ಷ ಸುರೇಶ ಚಲವಾದಿ, ಎಚ್.ಎಚ್.ಮುಲ್ಲಾ, ಗುಡ್ಡನಗೌಡ ಪ್ಯಾಟಿಗೌಡ್ರ, ರವಿ ಅಂಗಡಿ, ಶಿವಯೋಗಿ ಹೊಸಗೌಡ್ರ, ಇತರರಿದ್ದರು.
ದರ್ಶನ್ ಪುಟ್ಟಣ್ಣಯ್ಯ ಭಾಗಿ
ಶಾಸಕ ದರ್ಶನ ಪುಟ್ಟಣ್ಣಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಗಾವಿಯಲ್ಲಿ ಡಿ.9ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಕುರಿತು ಸರ್ಕಾರ ಗಂಭೀರವಾದ ಚರ್ಚೆ ನಡೆಸಿ, ಬಗೆಹರಿಸಬೇಕು ಎಂದು ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದರು.