ಶುಂಠಿ ಬೆಲೆ ಕುಸಿತ, ಖರೀದಿ ಕೇಂದ್ರ ತೆರೆಯಲು ಆಗ್ರಹ; ರಾಜ್ಯ ರೈತ ಸಂಘದಿಂದ ಪ್ರತಿಭಟನೆ, ಡಿಸಿಗೆ ಮನವಿ

30 HVR 7
Published on

ಹಾವೇರಿ: ಮಾರುಕಟ್ಟೆಯಲ್ಲಿ ಶುಂಠಿ ಬೆಲೆ ತೀವ್ರ ಕುಸಿತವಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಶುಂಠಿ ಬೆಳೆದ ಸಾವಿರಾರು ರೈತರು ಬಿದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯ ಪ್ರವೇಶಿಸಿ ಕನಿಷ್ಠ ಬೆಲೆಗೆ ಶುಂಠಿ ಖರೀದಿ ಮಾಡಬೇಕು ಎಂದು ರೈರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವ) ಜಿಲ್ಲಾ ಘಟಕದ ವತಿಯಿಂದ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಶುಂಠಿ ದರ 1,500ರಿಂದ 2,000 ಸಾವಿರ ಇದೆ. ಹಾಕಿದ ಬಂಡವಾಳ ಕೈ ಸೇರದೆ ರೈತರು ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. 2012 ಮತ್ತು 2023ರಲ್ಲಿ ಅರಿಶಿಣದ ಬೆಲೆ ಕುಸಿತವಾದಾಗ ಬೆಂಬಲ ಬೆಲೆ ಯೋಜನೆ ಜಾರಿ ಮಾಡಿ ಕರ್ನಾಟಕ ಹಾಗೂ ಅರುಣಾಚಲ ಪ್ರದೇಶದಲ್ಲಿ ಅರಿಶಿಣ ಖರೀದಿ ಮಾಡಲಾಗಿತ್ತು. ಅದರಂತೆ ರಾಜ್ಯದಲ್ಲಿಯೂ ಶುಂಠಿ ಖರೀದಿ ಕೇಂದ್ರ ಸ್ಥಾಪನೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಿ ಕನಿಷ್ಠ ಬೆಂಬಲ ಬೆಲೆ ಅಂದರೆ 7,000 ರೂ.ನಂತೆ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.

ಗರಿಷ್ಠ ಬೆಲೆ ಸಿಗುತ್ತದೆ ಎಂದು ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಹುತೇಕ ರೈತರು ಶುಂಠಿ ನಾಟಿ ಮಾಡಿದ್ದರು. ಹೊಲಕ್ಕೆ ತುಂತುರು ನೀರಾವರಿ ಸೆಟ್ ಅಳವಡಿಸಬೇಕು. ತಿಂಗಳಿಗೆ ಒಮ್ಮೆ ಕೀಟನಾಶಕ ಸಿಂಪಡಿಸಲು 5ರಿಂದ 10 ಸಾವಿರ ಖರ್ಚಾಗುತ್ತದೆ, ಕಳೆ ತೆಗೆಸಲು ಒಂದು ಸಲಕ್ಕೆ 25ರಿಂದ 30 ಕೂಲಿ ಆಳುಗಳು ಬೇಕು. ಒಟ್ಟಿನಲ್ಲಿ ಪ್ರತಿ ಎಕರೆಗೆ 2 ರಿಂದ 3 ಲಕ್ಷ ರೂಪಾಯಿ ಖರ್ಚು ಮಾಡಿ ದರ ಕುಸಿತದಿಂದ ಶುಂಠಿ ಬೆಳೆಗೆ ಹಾಕಿದ ವೆಚ್ಚವೂ ಕೈಗೆ ಬರದಂತೆ ಆಗಿದೆ. ಇದರಿಂದ ಜಿಲ್ಲೆಯ ಶುಂಠಿ ಬೆಳೆಗಾರರು ಸಾಲ ಮಾಡಿ ಬಿದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ರೈತರ ನೆರವಿಗೆ ಸರ್ಕಾರಗಳು ಧಾವಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರುದ್ರಗೌಡ ಕಾಡನಗೌಡ್ರ, ಶಿವಯೋಗಿ ಹೊಸಗೌಡ್ರ, ಮರಿಗೌಡ ಪಾಟಿಲ, ಅಶೋಕ ಬಣಕಾರ, ರುದ್ರಪ್ಪ ಅಣ್ಣಿ, ಸಂಗಪ್ಪ ಗುಂಡೂರ, ವರುಣ ಮಲ್ಲಿಗಾರ, ಸೋಮಣ್ಣ ಜಡೆಗೊಂಡ, ಷಣ್ಮುಖ ಅಂದಲಗಿ. ವಿ.ಎಸ್.ಗುಡಗೂರ. ಸುಭಾಸ ಬನ್ನಿಹಟ್ಟಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net