ಹಾವೇರಿ: ಐದು ಲಕ್ಷ ರೂ. ಪರಿಹಾರ ಕೊಡಲು ಆರಂಭಿಸಿದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಳವಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಇವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಈ ಕೂಡಲೇ ಕೈಬಿಡಬೇಕು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಣಕ್ಕಾಗಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲ್ಲ. ಈ ವರ್ಷ ಬರಗಾರ ಉಂಟಾಗಿದೆ. ರೈತರು ತಮ್ಮ ಕಷ್ಟಕ್ಕಾಗಿ ಆತ್ನಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಚಿವರು ಕೇವಲ ಗ್ಯಾರಂಟಿ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ. ಬೇರೆ ಜಿಲ್ಲೆಯವರನ್ನು ಉಸ್ತುವಾರಿ ಮಾಡಿದರೆ ಇದೇ ರೀತಿ ಆಗುತ್ತದೆ. ಈವರೆಗೆ ಇವರು ರೈತರ ಜತೆಗೆ ಚರ್ಚಿಸಿಲ್ಲ, ಹೊಲಕ್ಕೆ ಬಂದು ಬೆಳೆ ನೋಡಿಲ್ಲ. ತಿಂಗಳಿಗೆ ಒಂದೆರೆಡು ಬಾರಿ ಮಾತ್ರ ಜಿಲ್ಲೆಗೆ ಬರುತ್ತಾರೆ. ರೈತರ ಆತ್ಮಹತ್ಯೆ ವಿಚಾರದಲ್ಲೂ ರಾಜಕೀಯ ಮಾಡುವುದನ್ನು ಕೈಬಿಡಬೇಕು. ಆತ್ಮಹತ್ಯೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ಇವತ್ತೇ ನಾವು ರೈತ ಸಂಘದಿಂದ 50 ಲಕ್ಷ ರೂ. ಕೊಡುತ್ತೇವೆ. ಇವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಮೊದಲು ಇವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕೈಬಿಡಿಡಬೇಕು ಎಂದು ಒತ್ತಾಯಿಸಿದ್ದಾರೆ.
ನಾಚಿಗೆಯಾಗುವುದಿಲ್ಲವೇ ?
ಹಾವೇರಿ: ರೈತರ ಬಗ್ಗೆ ಸ್ವಲ್ಪವಾದರೂ ಗೌರವ ಇದ್ದಿದ್ದರೆ ಸಚಿವ ಶಿವಾನಂದ ಪಾಟೀಲರು ಈ ರೀತಿ ಹೇಳಿಕೆ ಕೊಡುತ್ತಿರಲಿಲ್ಲ. 5 ಲಕ್ಷ ರೂ. ಪರಿಹಾರ ಹೆಚ್ಚಿಸಿದ್ದಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ನಿಮ್ಮ ಸರ್ಕಾರ ಬಂದ ನಾಲ್ಕು ತಿಂಗಳಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಕೇವಲ 5 ಗ್ಯಾರಂಟಿಗಾಗಿ ಓಡಾಡುತ್ತಿದ್ದೀರಿ. ಇಂತಹ ಹೇಳಿಕೆ ನೀಡಿದ ನೀವು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿರಲು ಯೋಗ್ಯರಲ್ಲ. ಮುಖ್ಯಮಂತ್ರಿವರು ಈ ಕೂಡಲೇ ನಮ್ಮ ಜಿಲ್ಲೆಯ ಐವರಲ್ಲಿ ಒಬ್ಬರನ್ನು ಸಚಿವರನ್ನಾಗಿ ಘೋಷಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.