ಮೈಕ್ರೋ ಫೈನಾನ್ಸ್‌ಗಳ ಸಾಲ ಮನ್ನಾ ಮಾಡಿ; ರೈತ ಸಂಘದ ಪದಾಧಿಕಾರಿಗಳು, ಮಹಿಳೆಯರ ಆಗ್ರಹ

18 HVR 9
Published on

ಹಾವೇರಿ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಮಿತಿಮೀರಿದ್ದು, ಇದರಿಂದ ಸಾಲ ಪಡೆದ ಬಡ ಹೆಣ್ಣು ಮಕ್ಕಳು ಬೀದಿಗೆ ಬಂದಿದ್ದಾರೆ. ಫೈನಾನ್ಸ್‌ನವರ ಕಿರುಕುಳ ಹಾಗೂ ದಬ್ಬಾಳಿಕೆಯಿಂದ ಹಲವರು ಕುಟುಂಬಸಮೇತ ಊರು ಬಿಟ್ಟು ಹೋಗಿದ್ದಾರೆ. ಕೂಡಲೇ ಖಾಸಗಿ ಫೈನಾನ್ಸ್ ಕಡೆಯಿಂದ ಪಡೆದ ಎಲ್ಲ ಸಾಲವನ್ನು ಮನ್ನಾ ಮಾಡಬೇಕು. ಸಾಲ ಪಡೆದವರಿಗೆ ರಕ್ಷಣೆ ಕೊಟ್ಟು ಗೌರವದಿಂದ ಜೀವನ ನಡೆಸಲು ಅವಕಾಶ ನೀಡುಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಮಹಿಳೆಯರು ಆಗ್ರಹಿಸಿದರು.

ನಗರದ ತಾಪಂ ಕಚೇರಿ ಆವರದಲ್ಲಿರುವ ಸಂಸದ ಬಸವರಾಜ ಬೊಮ್ಮಾಯಿ ಅವರ ಸಂಸದರ ಕಚೇರಿ ಎದುರು ಗುರುವಾರ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ರಾಣೆಬೆನ್ನೂರ ತಾಲೂಕು ಅದ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಬಡವರನ್ನು ಟಾರ್ಗೆಟ್ ಮಾಡಿ ಸುಲಭ ರೀತಿಯಾಗಿ ಸಾಲ ನೀಡುವುದಾಗಿ ಹೇಳಿ ಸಾಲ ನೀಡಿದ ಮೇಲೆ ಅವರ ಮನೆಯವರೆಗೆ ಹೋಗಿ ವಿಪರೀತ ಕಿರುಕುಳ ನೀಡುತ್ತಿರುವ ಖಾಸಗಿ ಮೈಕ್ರೋ ಪೈನಾನ್ಸ್‌ಗಳ ಮೇಲೆ ಕಠಿಣ ಕಾನೂನು ಕ್ರಮ ಆಗಬೇಕು. ಬಡವರಿಗೆ ನೀಡಿರುವ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಹನುಮಂತಪ್ಪ ದೀವಗಿಹಳ್ಳಿ ಮಾತನಾಡಿ, ಬಡ,ಕೂಲಿ ಕಾರ್ಮಿಕರ ಕುಟುಂಬದ ಹೆಣ್ಣು ಮಕ್ಕಳ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರಗಳು ವಿಫಲವಾಗಿವೆ. ಬಡವರ ಹಣಕಾಸಿನ ತೊಂದರೆ ತಿಳಿದ ಖಾಸಗಿ ಮೈಕ್ರೋ ಪೈನಾನ್ಸ್‌ಗಳು ಸಂಘಗಳನ್ನು ನಿರ್ಮಿಸಿ ಸರಳ ವಿಧಾನದಲ್ಲಿ ಸಾಲ ಕೊಟ್ಟು ತದನಂತರ ಅವರ ಮನೆ ಬಾಗಿಲಿಗೆ ಹೋಗಿ ದಬ್ಬಾಳಿಕೆ ಮಾಡುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳು ನಮ್ಮ ಬಡವರಿಗೆ ಸರಳ ರೀತಿಯಲ್ಲಿ ಸಾಲ ಕೊಡದಿರುವುದೇ ಇಂತಹ ದುರಂತಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ರೈತರು ಅತಿವೃಷ್ಠಿಯಿಂದ ಸಂಪೂರ್ಣ ಬೆಳೆ ನಾಶವಾಗಿದ್ದು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರಮುಖರಾದ ರಾಜಶೇಖರ ದೂದಿಹಳ್ಳಿ, ಮಹೇಶ ಕೊಟ್ಟೂರ, ಮಂಜುನಾಥ ಸಂಬೋಜಿ, ರಾಜೇಶ ಅಂಗಡಿ, ಬಸವರಾಜ ಮೇಗಳಗೇರಿ, ಶೈಲಮ್ಮ ಅರಣಗೇರಿ, ಅಮೀಬಾ ನುಸಿದೆನೂರ, ನಾಗಮ್ಮ ತಳವಾರ, ಕೊಟ್ರಮ್ಮ ಕಾಯಿಕಾರ, ರೈಮಾ ಕಮ್ಮಾರ ರೇಖಮ್ಮ ಪೂಜಾರಿ, ನೀಲಮ್ಮ ಮೇಗಳಗೆರೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net