ಹಾವೇರಿ: ರಾಣೆಬೆನ್ನೂರ ತಾಲೂಕಿನಲ್ಲಿ ನಾಯಿ ಕೊಡೆಯಂತೆ ಸೃಷ್ಟಿಯಾಗಿರುವ ಖಾಸಗಿ ಮೈಕ್ರೋ ಫೈನಾನ್ಸ್‌ಗಳ ಹಾವಳಿಯನ್ನು ತಡೆಗಟ್ಟುವಂತೆ ರಾಜ್ಯ ರೈತ ಸಂಘ ರಾಣೆಬೆನ್ನೂರ ತಾಲೂಕು ಘಟಕ ಆಗ್ರಹಿಸಿದೆ.
ಶುಕ್ರವಾರ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಬೇರೆ ಜಿಲ್ಲೆಗಳಿಂದ ರಾಣೆಬೆನ್ನೂರಿಗೆ ಬಂದು ಸಾಲ ಕೊಟ್ಟು ವಸೂಲಿಗಾಗಿ ಧಮ್ಕಿ ಮಾಡುತ್ತಿದ್ದಾರೆ. ರಾತ್ರಿ 7 ಗಮಟೆಯಿಂದ 11 ಗಮಟೆವರೆಗೆ ಮನೆಯ ಮುಂದೆ ಬಂದು ಕಿರುಕುಳ ನೀಡುತ್ತಿದ್ದಾರೆ. ಕೆಲವರಂತೂ ಸಾಲ ವಸೂಲಿ ನೆಪದಲ್ಲಿ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಇದರಿಂದ ರೈತರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನ ಬೇಸತ್ತು ಹೋಗಿದ್ದಾರೆ.
ಒಮ್ಮೆ ಆಧಾರ್ ಕಾರ್ಡ್ ಪಡೆದು ಸಾಲ ಕೊಟ್ಟು, ಅದೇ ಕಾರ್ಡ್ ಹೆಸರಲ್ಲಿ ಬೇರೆ ಕಡೆಗಳಲ್ಲಿ ಸಾಲ ಪಡೆದು ಸಾಲಗಾರರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಇದರ ಹಿಂದೆ ಏಜೆಂಟರ ಕೈವಾಡ ಇದ್ದು, ಇಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಂಜಪ್ಪ ಎ.ಬಿ., ಜಗದೀಶ ತಳವಾರ, ಯಲ್ಲಪ್ಪ ಚಿಕ್ಕಣ್ಣನವರ, ಭರಮಪ್ಪ ತಳವಾರ, ಶೈಲಜಾ ಆದ್ರಿಹಳ್ಳಿ, ಶಿಲ್ಪಾ ಸಣ್ಣಮನಿ, ಉಚ್ಚೆಂಗೆಮ್ಮ ಬಕ್ಕಜ್ಜಿ, ಇತರರಿದ್ದರು.