

ಹಾವೇರಿ: ಹಲವು ದಶಕಗಳ ಬೇಡಿಕೆಯಾದ ಬೇಡ್ತಿ- ವರದಾ ನದಿಗಳ ಜೋಡಣೆ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸುವಂತೆ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಸದಸ್ಯರ ಮನೆಗಳ ಎದುರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ವಿಧಾನಸಭಾ ಉಪ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹಾಗೂ ಬಸವರಾಜ ಶಿವಣ್ಣನವರ ನಿವಾಸದ ಎದುರು ಗುರುವಾರ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು, ಶಾಸಕರ ನಿವಾಸದ ಸಿಬ್ಬಂದಿ ಮೂಲಕ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ಅಖಂಡ ಧಾರವಾಡ ಜಿಲ್ಲೆಯಲ್ಲಿ ಹುಟ್ಟಿ, ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿ, ಯಲ್ಲಾಪುರ, ಶಿರಸಿ ಉಪ ನದಿಗಳನ್ನು ಕೂಡಿಕೊಂಡು, ಅಂಕೋಲಾ ತಾಲೂಕು ಪ್ರವೇಶಿಸಿ, ಗಂಗಾವಳಿ ನದಿಯಾಗಿ ಅರಬ್ಬಿ ಸಮುದ್ರ ಸೇರುವ ನೀರನ್ನು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಕೃಷಿ ಭೂಮಿಯ ನೀರಾವರಿಗೆ ಕೇಳುತ್ತಿದ್ದೇವೆ.
ಅನ್ನದಾತ ಗೋಳು ಹೇಳಿಕೊಳ್ಳುವ ಮೊದಲೇ ಸರ್ಕಾರಗಳು ಸಕಾರಾತ್ಮಕ ನೀರಾವರಿ ಯೋಜನೆಗಳನ್ನು ರೂಪಿಸಿ ನೀರಾವರಿ ಯೋಜನೆಗಳನ್ನು ಸಾಕಾರ ಮಾಡುವ ಇಚ್ಛಾಶಕ್ತಿ ಹೊಂದಬೇಕು. ಅನಾವೃಷ್ಠಿಯಿಂದ ಭೂಮಿ ಬಾಯಾರಿ ರೈತನ ಬದುಕು ಕೈಮೀರಿ ಹೋಗುವ ಮೊದಲು ಜಲಮೂಲಗಳನ್ನು ಕೃಷಿ ಭೂಮಿಗೆ ಹರಿಸುವ ಮಹತ್ಕಾರ್ಯ ಸರ್ಕಾರಗಳಿಂದ ಅಗಬೇಕು. ಅದು ಆಗದೇ ಇದ್ದಾಗ ಅನ್ನದಾತನ ಹೋರಾಟಗಳು ಅನಿವಾರ್ಯವಾಗುತ್ತವೆ.
ಕೇಂದ್ರ ಸರ್ಕಾರದ ಜಲನೀತಿ ಅನ್ವಯ ವರದಾ ಬೇಡ್ತಿ ನದಿ ಜೋಡಣೆ ಪ್ರಸ್ತಾಪ ಸರ್ಕಾರದ ಮುಂದಿದೆ. 2003ರಲ್ಲಿ ಕೇಂದ್ರದ ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ ಅಧ್ಯಯನ ನಡೆಸಿ ಯೋಜನೆ ಸರಿಯಾಗಿದೆ ಎಂದು ಪ್ರಸ್ತಾಪಿಸಿದೆ. 2011ರಲ್ಲಿ ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಕೂಡ ಸೂಚಿಸಿದೆ.
ಬೇಡ್ತಿ ನದಿಯಿಂದ ಕೇವಲ 20 ಕಿ.ಮೀ. ಕಾಮಗಾರಿಯಿಂದ ವರದಾ ನದಿಯನ್ನು ಕೂಡುವ ಈ ನದಿ ಜೋಡಣೆ ದೇಶದಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ನೀರಾವರಿಗೆ ಸೂಕ್ತ ಹಾಗೂ ಅತ್ಯಾವಶ್ಯಕ ಜಲಮೂಲವಾಗಿದೆ. ಇದು ಜನಪ್ರತಿನಿಧಿಗಳಿಗೆ ಹಾಗೂ ನೀರಾವರಿ ತಜ್ಞರಿಗೆ ಮನವರಿಕೆಯಾದ ವಿಷಯವೂ ಆಗಿದೆ. ಆದರೆ, ಇದರ ಅನುಷ್ಠಾನಕ್ಕೆ ಎಲ್ಲರ ಇಚ್ಛಾಶಕ್ತಿಯೇ ಅತ್ಯಂತ ಅಗತ್ಯ.
ಇದಕ್ಕೆ ಹಾವೇರಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಸ್ಪಂದಿಸಿ ಯೋಜನೆ ಸಾಕಾರಕ್ಕೆ ತೀರ್ವ ಕಾರ್ಯಪ್ರವೃತ್ತರಾಗಬೇಕು. ಬಜೆಟ್‌ನಲ್ಲಿ ಘೊಷಿಸಬೇಕು. ಅಧಿವೇಶನದಲ್ಲಿ ಇದಕ್ಕೆ ಬೇಕಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಬೇಡಿಕೆ ಈಡೇರದಿದ್ದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ಆರಂಭಿಸಲಾಗವುದು ಎಂದು ರೈತರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ದಿಳ್ಳೆಪ್ಪ ಮಣ್ಣೂರ, ರುದ್ರಗೌಡ ಕಾಡನಗೌಡ್ರ, ಶಿವಬಸಪ್ಪ ಗೋವಿ, ಶಿವಯೋಗಿ ಹೊಸಗೌಡ್ರ, ಶಿದ್ಲಿಂಗಪ್ಪ ಬಳ್ಳಾರಿ, ಮಂಜುನಾಥ ಕದಂ, ಜಾನ್ ಪುನೀತ್, ಸುಭಾಸ ಬನ್ನಿಹಟ್ಟಿ, ಶಿವರುದ್ರಪ್ಪ ಮೂಡಿ, ರವಿ ಅಂಗಡಿ, ಮಂಜುನಾಥ ಬನ್ನಿಹಟ್ಟಿ, ಕಲ್ಲಪ್ಪ ಸಣಮನಿ, ವಿರುಪಾಕ್ಷಪ್ಪ ಕುರಗೊಡಿ, ಸಂಜೀವ ಬಿಸ್ಟಂಡಿ, ವಿ.ಎಚ್ ಗುಡಗೂರ, ನಂಜುಂಡಸ್ವಾಮಿ, ಬಸಣ್ಣ ಚಂದ್ರಪ್ಪನವರ, ಮಂಜು ಹೇಮನಗೌಡ್ರ, ಮುಂತಾದವರು ಉಪಸ್ಥಿತರಿದ್ದರು.
ಸಂಪೂರ್ಣ ಜಿಲ್ಲೆಗೆ ನೀರಾವರಿ ಸೌಲಭ್ಯ
ಬೇಡ್ತಿ- ವರದಾ ನದಿಗಳ ಜೋಡಣೆಯಿಂದ ನೂರಾರು ಟಿಎಂಸಿ ನೀರು ಸಮುದ್ರಕ್ಕೆ ಸೇರಿ ಉಪ್ಪಾಗುವ ಬದಲು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ 6 ಜಿಲ್ಲೆಗಳ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಿಸಲಿದೆ. ಹಾವೇರಿ ಜಿಲ್ಲೆ ಸಂಪೂರ್ಣ ನೀರಾವರಿ ಆಗಲಿದ್ದು, ಒಟ್ಟು 16 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರೊದಗಿಸುವ ಶಕ್ತಿ ಇದಕ್ಕಿದೆ. ಎಲ್ಲ ಪಟ್ಟಣ ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸುವ ಶಕ್ತಿಯನ್ನು ಕೂಡ ಇದು ಹೊಂದಿದೆ. ಅಂತರ್ಜಲ ಮಟ್ಟವನ್ನೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಿದೆ ಎಂದು ಮಲ್ಲಿಕಾರ್ಜುನ ಬಳ್ಳಾರಿ ವಿವರಿಸಿದರು.