ರೈತರ ಸಂಕಷ್ಟಗಳಿಗೆ ಸ್ಪಂದಿಸುವವರಿಗೆ ಬೆಂಬಲ; ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿಕೆ; ಅನ್ನದಾತರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ

1 HVR 3
Published on

ಹಾವೇರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ‘ರೈತರ ಪ್ರಣಾಳಿಕೆ’ ಬಿಡುಗಡೆ ಮಾಡಿದ್ದೇವೆ. ರೈತರ ಸಮಸ್ಯೆಗನ್ನು ಈಡೇರಿಸುವ ನಿಟ್ಟಿನಲ್ಲಿ ಯಾರು ಪ್ರಾಮಾಣಿಕವಾಗಿ ಸ್ಪಂದಿಸುತ್ತಾರೋ ಅವರಿಗೆ ನಾವು ಬೆಂಬಲ ಘೋಷಿಸುತ್ತೇವೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಹಾಕಲು ರೈತರು ಬೇಕು. ಆದರೆ, ಅವರಿಗೆ ಸಂಕಷ್ಟ ಬಂದಾಗ ಕೇಂದ್ರ, ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ಬರ ಆವರಿಸಿದ್ದರಿಂದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡಿದ್ದೇವೆ. ರಾಜ್ಯ ಸರ್ಕಾರ 18 ಸಾವಿರ ಕೋಟಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿತ್ತು. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರಲಿಲ್ಲ, ಸುಪ್ರೀಂಕೋರ್ಟ್ ನಿರ್ದೇಶನದ ಬಳಿಕ ಈಗ ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್ ನಿಯಮದ ಪ್ರಕಾರ 3,454 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವೂ ಅಷ್ಟೇ ಪ್ರಮಾಣದ ಅನುದಾನ ಬಿಡುಗಡೆ ಮಾಡಿ ರೈತರಿಗೆ ಬೆಳನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಬೆಳೆ ನಷ್ಟವಾಗಿದ್ದರೂ ಈವರೆಗೂ ಸರಿಯಾಗಿ ಬೆಳೆವಿಮೆ ಹಣ ಬಿಡುಗಡೆ ಆಗಿಲ್ಲ. ಸರ್ಕಾರಗಳು ಬರೀ ಚುನಾವಣೆ ಗುಂಗಿನಲ್ಲಿವೆ. ನದಿಗಳಿಂದ ಕೆರೆ ತುಂಬಿಸುವ ಯೋಜನೆಗಳು ಮಂದಗತಿಯಲ್ಲಿ ಸಾಗಿದ್ದು, ಬರಗಾಲ ತಡೆಯಬೇಕಾದರೆ ಕೆರೆಗಳಿಗೆ ನೀರು ತುಂಬಿಸುವುದು ಅಗತ್ಯ. ಹೀಗಾಗಿ ಕೆರೆ ತುಂಬಿಸುವ ಯೋಜನೆಗಳಿಗೆ ಚುರುಕು ಮುಟ್ಟಿಸಬೇಕು. ನಮ್ಮ ಪ್ರಣಾಳಿಕೆಗೆ ಸೂಕ್ತ ನ್ಯಾಯ ಒದಗಿಸುವ ಪಕ್ಷಕ್ಕೆ ಬೆಂಬಲ ನೀಡುತ್ತೇವೆ. ಈ ಬಗ್ಗೆ ಮೇ 2ರಂದು ಬ್ಯಾಡಗಿ ಪಟ್ಟಣದಲ್ಲಿ ಜಿಲ್ಲಾಮಟ್ಟದ ಸಭೆ ಕರೆಯಲಾಗಿದ್ದು, ಅಲ್ಲಿ ಯಾರಿಗೆ ಬೆಂಬಲ ಅಥವಾ ನೋಟಾ ಒತ್ತುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಮರಿಗೌಡ ಪಾಟೀಲ, ಮಂಜುನಾಥ ಕದಂ, ರಾಜು ತರ್ಲಘಟ್ಟ, ಶಂಕರಗೌಡ ಶಿರಗಂಬಿ, ಯಶವಂತ ಯಡಗೋಡಿ, ಸೋಮಣ್ಣ ಜಡೇಗೌಡ್ರ, ಮಂಜುಗೌಡ ಸಣ್ಣಗೌಡ್ರ, ಗುತ್ತಪ್ಪ ಶಿಗ್ಗಾಂವಿ, ಚನ್ನಪ್ಪ ಮರಡೂರ, ಇತರರಿದ್ದರು.
ಹೈಕೋರ್ಟ್ ಮೊರೆ ಎಚ್ಚರಿಕೆ
ಬರ ಪರಿಹಾರ ನೀಡುವಂತೆ ಯಾವ ರೈತರೂ ಅರ್ಜಿ ಕೊಟ್ಟಿಲ್ಲ ಎಂದು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾವೇರಿ ಜಿಲ್ಲೆಯೊಂದರಲ್ಲೇ 18,000 ಅರ್ಜಿ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಮೂಲಕ 3,454 ಕೋಟಿ ರೂ., ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವೂ ಎಸ್‌ಡಿಆರ್‌ಎಫ್ ಮೂಲಕ 3,454 ಕೋಟಿ ರೂ., ಬಿಡುಗಡೆ ಮಾಡಿ ಕೂಡಲೇ ರೈತರ ಖಾತೆಗೆ ಬರ ಪರಿಹಾರ ಜಮೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆಯಿಂದ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net