

ಹಾವೇರಿ: ಇಂದಿನ ಯುವಪೀಳಿಗೆ ಕೃಷಿಯತ್ತ ಧಾವಿಸಬೇಕು. ಆರ್ಥಿಕ ಬೆಳೆಗಳನ್ನು ಬೆಳೆಯಬೇಕು. ಹೊಸ ಹೊಸ ಸಂಶೋಧನೆ, ಪ್ರಯೋಗಗಳ ಮೂಲಕ ಯಶಸ್ವಿ ಕೃಷಿಕರೆನಿಸಿಕೊಳ್ಳಬೇಕು ಎಂದು ಹಿರಿಯ ರೈತ ಶಿವಬಸಪ್ಪ ಗೋವಿ ಸಲಹೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕೃಷಿ ಇಲಾಖೆ, ತಾಲೂಕು ಕೃಷಿಕ ಸಮಾಜ, ಜೈಕಿಸಾನ್ ಹಾಗೂ ವಿವಿಧ ರೈತ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿರಿಯರ ಮಾರ್ಗದರ್ಶನದ ಜತೆಗೆ ತಮ್ಮ ಹೊಲದಲ್ಲಿ ಬುದ್ದಿವಂತಿಕೆಯಿಂದ ವ್ಯವಸಾಯ ಮಾಡಿದರೆ ಕಾರ್ಪೋರೇಟ್ ಕಂಪನಿಗಳಿಗಿಂತ ಹೆಚ್ಚು ಲಾಭ ಪಡೆಯಬಹುದು ಎಂಬುದನ್ನು ಹಲವರು ತೋರಿಸಿಕೊಟ್ಟಿದ್ದಾರೆ. ಅಂಥವರಿಂದ ಸಲಹೆ ಪಡೆದು ಯಶಸ್ವಿ ರೈತರಾಗಲು ಯುವಕ- ಯುವತಿಯರು ಮನಸು ಮಾಡಬೇಕು ಎಂದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ.ಬಿ.ಎಚ್ ಮಾತನಾಡಿ, ಭಾರತದ ಐದನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರಾಷ್ಟ್ರೀಯ ರೈತರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಅವರು ಭಾರತೀಯ ರೈತರ ಜೀವನವನ್ನು ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಹಾದಿಮನಿ ಮಾತನಾಡಿ, ಚೌಧರಿ ಚರಣಸಿಂಗ್ ಅವರು ಪ್ರಧಾನಿಯಾದ ಅಲ್ಪ ಸಮಯದಲ್ಲೇ ನೀರಾವರಿ ಯೋಜನೆ ಸೇರಿದಂತೆ ಅನೇಕ ರೈತಪರ ಯೋಜನೆಗಳನ್ನು ಜಾರಿಗೆ ತಂದರು ಎಂದರು.
ಹನುಮಂತಪ್ಪ ಹುಚ್ಚಣ್ಣನವರ ಉಪನ್ಯಾಸ ನೀಡಿದರು.
ರೈತ ಸಂಘದ ಪದಾಧಿಕಾರಿಗಳಾದ ಸುರೇಶ ಛಲವಾದಿ, ಬಸವರಾಜ ಡೊಂಕಣ್ಣನವರ, ನಾಗಪ್ಪ ವಿಭೂತಿ, ಅಶೋಕ ಹೆಡಿಯಾಲ, ಶಿವನಗೌಡ ಗಾಜಿಗೌಡ್ರ, ದಿಳ್ಳೆಪ್ಪ ಮಣ್ಣೂರ, ಹನುಮಂತಪ್ಪ ಹುಚ್ಚಣ್ಣನವರ, ರಾಜೇಸಾಬ ತರ್ಲಘಟ್ಟ, ಫಕ್ಕೀರಗೌಡ ಗಾಜಿಗೌಡ್ರ, ಶೇಖಪ್ಪ ಹಲಸೂರ, ತಾಂತ್ರಿಕ ವ್ಯವಸ್ಥಾಪಕರಾದ ಸುರೇಶ ನಾಯಕ, ಚಂದ್ರಗೌಡ ಹೊಸಗೌಡ್ರ, ಇತರರು ಇದ್ದರು.
ಕೃಷಿ ಅಧಿಕಾರಿ ಬಸನಗೌಡ ಪಾಟೀಲ ಸ್ವಾಗತಿಸಿದರು. ಆತ್ಮಾ ಅಧಿಕಾರಿಗಳಾದ ಚಂದ್ರಶೇಖರ ಎಸ್.ಕೆ ನಿರೂಪಿಸಿದರು. ಗುತ್ತಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪುಟ್ಟರಾಜ ಹಾವನೂರ ವಂದಿಸಿದರು.