ನದಿ ಪಾತ್ರದ ಜನರನ್ನು ಸ್ಥಳಾಂತರಿಸಿ; ತಗ್ಗು ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ; ತಹಸೀಲ್ದಾರ್‌ಗಳಿಗೆ ಡಿಸಿ ಸೂಚನೆ

17 HVR 4 B
Published on

ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ನದಿ ಪಾತ್ರದಲ್ಲಿ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ತಹಸೀಲ್ದಾರರಿಗೆ ಹಾಗೂ ಇತರ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ.
ನಿರಂತರ ಮಳೆಯಿಂದಾದ ಅನಾಹುತಗಳನ್ನು ತಡೆಗಟ್ಟಲು ಹಾಗೂ ಸಮರ್ಪಕವಾಗಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಲು ಆಯಾ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮ ಸಹಾಯಕರು, ಗ್ರಾಮ ಆಡಳಿತ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಎಲ್ಲ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಚ್ಚಾಮನೆಗಳಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಗಾಗಿ ರಾತ್ರಿ ವೇಳೆಯಲ್ಲಿ ವಾಸ್ತವ್ಯಕ್ಕಾಗಿ ತಾತ್ಕಾಲಿಕವಾಗಿ ಹತ್ತಿರದ ಸಂಬಂಧಿಕರ ಮನೆ ಅಥವಾ ಗ್ರಾಮದಲ್ಲಿರುವ ಸಮುದಾಯ ಭವನ, ಶಾಲೆಗಳಲ್ಲಿ ಅಥವಾ ಅಂಗನವಾಡಿಗಳಿಗೆ ಸ್ಥಳಾಂತರಿಸಬೇಕು ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ನದಿ ಪಾತ್ರಕ್ಕೆ ಬಟ್ಟೆ ತೊಳೆಯಲು ಹೋಗಬಾರದು ಹಾಗೂ ದನಕರುಗಳನ್ನು ನದಿಪಾತ್ರಕ್ಕೆ ಬಿಡಬಾರದು. ಪ್ರವಾಹದಿಂದ ಸೇತುವೆ ಹಾಗೂ ರಸ್ತೆಗಳ ಸಂಪರ್ಕಗಳು ಕಡಿತಗೊಂಡಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ. ಸಾರ್ವಜನಿಕರು ಈ ರಸ್ತೆಗಳ ಮೇಲೆ ಓಡಾಡುವುದಾಗಲಿ ಹಾಗೂ ವಾಹನಗಳನ್ನು ತೆಗೆದುಕೊಂಡು ಹೋಗಬಾರದು. ಈ ರಸ್ತೆಗಳ ಬದಲಾಗಿ ಪರ್ಯಾಯ ರಸ್ತೆಗಳನ್ನು ಉಪಯೋಗಿಸಲು ಸಲಹೆ ನೀಡಲಾಗಿದೆ.
ನಿರಂತರ ಮಳೆ-ಗಾಳಿಯಿಂದ ಮರಳು, ವಿದ್ಯುತ್ ಕಂಬ, ವಿದ್ಯುತ್ ತಂತಿಗಳು ಬೀಳುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ ಮಕ್ಕಳು, ಸಾರ್ವಜನಿಕರು ಇಂತಹ ಸ್ಥಳಗಳಲ್ಲಿ ಓಡಾಡಬಾರದು ಹಾಗೂ ಜಾನುವಾರುಗಳನ್ನು ಬಿಡಬಾರದು ಎಂದು ಡಿಸಿ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ತುರ್ತು ಸಹಾಯವಾಣಿ
ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕವಾರು ಸಹಾಯವಾಣಿ ಆರಂಭಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಸಹಾಯವಾಣಿಗಳಿಗೆ ಕರೆ ಮಾಡಿ ನೆರವು ಪಡೆಯಬಹುದು. ಹಾವೇರಿ-08375-232445, ರಾಣೆಬೆನ್ನೂರ-08373-260449, ಬ್ಯಾಡಗಿ-08375-228428, ಹಿರೇಕೆರೂರ-08376-282231, ರಟ್ಟಿಹಳ್ಳಿ-08376-200147, ಸವಣೂರ-08378-241626, ಶಿಗ್ಗಾಂವಿ-8147050299 ಹಾಗೂ ಹಾನಗಲ್ಲ-08379-262241 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net