

ಹಾವೇರಿ: ಗಂಟೆಗೆ 120 ಕಿ.ಮೀ. ವೇಗದಲ್ಲಿ ವಂದೇ ಭಾರತ ರೈಲು ಸಂಚರಿಸಲಿದೆ. ಈ ಭಾಗದ ಟ್ರ್ಯಾಕ್ ಅನ್ನು ಗಂಟೆಗೆ 110 ಕಿ.ಮೀ. ವೇಗಕ್ಕೆ ಸಿದ್ಧಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ 130 ಕಿ.ಮೀ. ವೇಗಕ್ಕೆ ಟ್ರ್ಯಾಕ್ ಸಿದ್ಧಪಡಿಸಲಾಗುವುದು. ಅಮೃತ ಭಾರತ ಯೋಜನೆಯಡಿ ಹಾವೇರಿ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮೈಸೂರು ವಿಭಾಗದ ರೈಲ್ವೆ ಅಧಿಕಾರಿ ರವಿಚಂದ್ರನ್ ಹೇಳಿದರು.
ಧಾರವಾಡ-ಬೆಂಗಳೂರ ನಗರಗಳ ನಡುವೆ ಹಾವೇರಿ ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ ಎಕ್ಸ್‌ಪ್ರೆಸ್ ರೈಲಿಗೆ ವರ್ಚುವಲ್ ಮೂಲಕ ದೆಹಲಿಯಿಂದ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಂಗವಾಗಿ ಹಾವೇರಿ ಮಹದೇವಪ್ಪ ಮೈಲಾರ ರೈಲು ನಿಲ್ದಾಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಾವೇರಿ ಪ್ರಧಾನ ಅಂಚೆ ಕಚೇರಿ ಅಧೀಕ್ಷಕ ಆರ್.ಅಶೋಕ ಮಾತನಾಡಿ, ಈ ರೈಲು ಆರಂಭದಿಂದ ಈ ಭಾಗದ ಜನರಿಗೆ ಹೆಚ್ಚಿನ ಅನೂಕಲವಾಗಲಿದೆ. ಹಾವೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ರೈಲ್ವೆ ಪ್ರಯಾಣದ ಮುಂಗಡ ಟಿಕೇಟ್ ಕಾಯ್ದಿರಿಸಬಹುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹಾವೇರಿ ವಾಣಿಜ್ಯೋದ್ಯಮ ಸಂಘದ ಉಪಾಧ್ಯಕ್ಷ ನಾಗರಾಜ ರೋಣದ ಮಾತನಾಡಿ, ವಂದೇ ಭಾರತ ರೈಲು ಸಂಚಾರ ಆರಂಭಿಸಿದ್ದು ಬಹಳ ಸಂತಸದ ಸಂಗತಿಯಾಗಿದೆ. ಹಾವೇರಿ ರೈಲು ನಿಲ್ದಾಣದಲ್ಲಿ ಈ ರೈಲು ನಿಲುಗಡೆಗೆ ಕ್ರಮವಹಿಸಬೇಕು ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಎಲ್‌ಐಸಿ ಹಿರಿಯ ವ್ಯವಸ್ಥಾಪಕರಾದ ರಚನಾ, ಅಂಚೆ ಕಚೇರಿ ಹೆಡ್ ಮಾಸ್ಟರ್ ಮಂಜುನಾಥ ಕಳಸೂರ, ಹಿರಿಯ ವರ್ತಕ ಚನ್ನಬಸಪ್ಪ, ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ದಾವಣಗೆರೆ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರಶಾಂತ ಸ್ವಾಗತಿಸಿದರು.