ನೀರು ಪೂರೈಕೆಗಾಗಿ ವಾಟರ್ ಮ್ಯಾಪಿಂಗ್ ಮಾಡಿ; ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿಶಾಲ ಸೂಚನೆ

5 HVR 3 A
Published on

ಹಾವೇರಿ: ಮುಂಗಾರು ಮಳೆ ಅಭಾವದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಕುಡಿಯುವ ನೀರು ಪೂರೈಕೆ ಕುರಿತಂತೆ ವಾಟರ್ ಮ್ಯಾಪಿಂಗ್ ಮಾಡಿ. ಯಾವ ಗ್ರಾಮ, ಯಾವ ವಾರ್ಡ್‌ನಲ್ಲಿ ನೀರು ಪೂರೈಕೆಯ ಅಗತ್ಯತೆ ಇದೆ, ನೀರಿನ ಮೂಲ ಯಾವುದು, ಅದರ ಪ್ರಮಾಣ ಕುರಿತಂತೆ ಸಮೀಕ್ಷೆ ಮಾಡಿ. ಅಗತ್ಯಕ್ಕೆ ತಕ್ಕಂತೆ ನೀರು ಸರಬರಾಜು ಮಾಡಿ ಎಂದು ಜಿಲ್ಲೆಯ ಅಧಿಕಾರಿಗಳಿಗೆ ನೂತನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿಶಾಲ ಆರ್. ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮುಂಗಾರು ಮಳೆ ಅಭಾವದಿಂದ ಉಂಟಾಗಿರುವ ಕುಡಿಯುವ ನೀರು-ಜಾನುವಾರುಗಳಿಗೆ ಮೇವು ಪೂರೈಕೆ ಹಾಗೂ ಕಂದಾಯ ಇಲಾಖೆ ಪ್ರಗತಿ ಕುರಿತು ಪರಿಶೀಲನೆ ನಡೆಸಿದರು.
ಕುಡಿಯುವ ನೀರಿನ ಯೋಜನೆ ತಯಾರಿಸುವಾಗ ಜನಸಂಖ್ಯೆ ಬೆಳವಣಿಗೆಗೆ ಅನುಸಾರವಾಗಿ ಯೋಜನೆ ತಯಾರಿಸಿ. ಕುಡಿಯುವ ನೀರು ಪೂರೈಕೆಗೆ ಟ್ಯಾಂಕರ್ ಆರಂಭಿಸುವ ಮುನ್ನ ತಹಶೀಲ್ದಾರ್, ತಾಪಂ ಇಒ, ಜಿಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಿಡಿಒಗಳ ಸಮಿತಿ ಪರಿಶೀಲಿಸಬೇಕು. ಟ್ಯಾಂಕರ್ ನೀರು ಅನಿವಾರ್ಯವಾಗಿದ್ದಲ್ಲಿ ಡಿಸಿಯವರ ಗಮನಕ್ಕೆ ತಂದು ಆರಂಭಿಸಿ. ಅದಕ್ಕೂ ಮುನ್ನ ಸಮಿತಿಯು ನಡಾವಳಿ ಮಾಡಿ, ದಾಖಲೀಕರಣ ಮಾಡಿ ಎಂದು ಸೂಚಿಸಿದರು.
ಕಂದಾಯ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿ ಮಾಡಲು ವಾರಕ್ಕೆರಡು ಬಾರಿ ಕೋರ್ಟ್ ನಡೆಸಿ. ಜು.20ರೊಳಗಾಗಿ ಹಳೆಯ ಪ್ರಕರಣಗಳನ್ನು ವಿಲೇಗೊಳಿಸಲು ಕಾಲಮಿತಿ ನಿಗದಿಪಡಿಸಿದರು. ಭೂಮಿ, ಸಕಾಲ ಒಳಗೊಂಡಂತೆ ತಹಶೀಲ್ದಾರ್ ಕಚೇರಿಯ ಸಾರ್ವಜನಿಕ ಸೇವೆಯನ್ನು ಚುರುಕಾಗಿ ನಿರ್ವಹಿಸಲು ವಿದ್ಯುತ್ ಕೊರತೆ, ಇತರೆ ಸಮಸ್ಯೆ ಎದುರಾಗದಂತೆ ಎಲ್ಲ ಕಚೇರಿಗೂ ಯುಪಿಎಸ್ ಖರೀದಿಸುವಂತೆ ಸೂಚಿಸಿದರು.
ಹೋಬಳಿಗೊಂದು ಮೇವು ಬ್ಯಾಂಕ್ ಆರಂಭಿಸಿ. ಅತಿ ಅವಶ್ಯವಿದ್ದ ಪ್ರದೇಶದಲ್ಲಿ ಗೋಶಾಲೆ ಆರಂಭಿಸಿ. ಮೇವು ಬ್ಯಾಂಕಿಗೆ ಅಗತ್ಯ ಇರುವ ಮೇವು ದೊರೆಯುವ ಸ್ಥಳ ಗುರುತಿಸಿಕೊಳ್ಳಿ. ಅಗತ್ಯಬಿದ್ದರೆ ಖರೀದಿಸಿ ದಾಸ್ತಾನು ಮಾಡಿಕೊಳ್ಳಿ. ಕೊಳವೆಬಾವಿ ಇರುವ ರೈತರಿಗೆ ಮೇವು ಬಿತ್ತನೆ ಕಿಟ್ ವಿತರಿಸಿ ಮೇವು ಬೆಳೆಯಲು ಪ್ರೋತ್ಸಾಹಿಸಿ ಎಂದು ಪಶು ಶಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ಹೇಳಿದರು.
ಎಲ್ಲ ಕಚೇರಿಗಳಲ್ಲಿ ಸ್ವಚ್ಛತೆ ಬಗ್ಗೆ ಗಮನಹರಿಸಿ. ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಮಾಡಿ. ಜಿಲ್ಲೆಯಲ್ಲಿ ಮರಣದ ದಾಖಲೆ ನವೀಕರಣ ಮಾಡಿಸಿ. ಮರಣ ಹೊಂದಿವರ ಇಲಾಖಾವಾರು ಅಪ್‌ಡೆಟ್ ಮಾಡಿಸಿ. ಈ ಕಾರ್ಯವನ್ನು ಆಂದೋಲನದ ರೀತಿಯಲ್ಲಿ ಕೈಗೊಳ್ಳಿ ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಗೀತಾ, ಸವಣೂರು ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಎಲ್ಲ ತಾಲೂಕುಗಳ ತಹಶೀಲ್ದಾರರು, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಪುನರ್ ವಸತಿ ಒದಗಿಸಿ : ಸಿಡಿಲು, ಇತರೆ ಪ್ರಾಕೃತಿಕ ವಿಕೋಪದಿಂದ ಜನ-ಜಾನುವಾರು ಮರಣ ಹೊಂದಿದರೆ ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸಿ. ಪರಿಹಾರದ ಜತೆಗೆ ಸಂಕಷ್ಟಕ್ಕೀಡಾದವರ ಕುಟುಂಬದವರ ಮಕ್ಕಳ ಶಿಕ್ಷಣ ಹಾಗೂ ಇತರೆ ಯೋಜನೆಯಡಿ ಸೌಲಭ್ಯ ಮಂಜೂರು ಮಾಡಿ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net