ಸಂಗೀತ ಧಾರೆ ಎರೆದ ಪುಟ್ಟರಾಜ ಗವಾಯಿಗಳು; ಗಾನಯೋಗಿಯ ಜಯಂತ್ಯುತ್ಸವದಲ್ಲಿ ಚಂಪಾ ಹುಣಸಿಕಟ್ಟಿ ಹೇಳಿಕೆ

7 HVR 2
Published on

ಹಾವೇರಿ: ಡಾ.ಪಂಡಿತ್ ಪುಟ್ಟರಾಜ ಗವಾಯಿಗಳು ಕಣ್ಣು ಕಾಣಿಸದಿದ್ದರೂ ಸಂಗೀತದಲ್ಲಿ ಮೇರು ಸಾಧನೆ ಮಾಡಿ, ಸಾವಿರಾರು ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆದುಕೊಟ್ಟರು. ತಮ್ಮ ಆಶ್ರಮದ ಮೂಲಕ ಅನೇಕ ಅಂಧರಿಗೆ, ಅನಾಥರಿಗೆ ದಾರಿದೀಪವಾದ ಮಹಾನ್ ಚೇತನ. ಅವರ ಸಾಧನೆ ಪ್ರತಿಯೊಬ್ಬ ಮಗುವಿಗೂ ತಿಳಿಯುವಂತಾಗಬೇಕು ಎಂದು ಹುಕ್ಕೇರಿ ಮಠ ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಹುಣಸಿಕಟ್ಟಿ ಹೇಳಿದರು.

ನಗರದ ಮೇಲಿನ ಪೇಟೆಯ ರಶ್ಮಿ ತುಪ್ಪದ ಅವರ ನಿವಾಸದಲ್ಲಿ ಡಾ.ಪಂಡಿತ್ ಪುಟ್ಟರಾಜ ಸೇವಾ ಸಮಿತಿ ಹಾವೇರಿ ತಾಲೂಕ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುಡ್ಡಪ್ಪ ಓಂಕಾರಣ್ಣನವರ ಮಾತನಾಡಿ, ಸಂಗೀತದ ಮೂಲಕ ಮಾನವೀಯತೆ ಹಾಗೂ ಸರಳತೆ ಮೆರೆದ ಪುಟ್ಟರಾಜ ಗವಾಯಿಗಳು ಗದಗನಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿಸಿ ಸಾವಿರಾರು ಗಾಯಕರಿಗೆ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತ ಕಲಿಸಿಕೊಟ್ಟಿದ್ದಾರೆ ಎಂದರು.

ಫಕ್ಕಿರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂತಾರಾಷ್ಟ್ರೀಯ ವಚನ ಸ್ಪರ್ಧೆಯಲ್ಲಿ ವಿಜೇತರಾದ ದಿಯಾ ತುಪ್ಪದ ಅವರನ್ನು ಸನ್ಮಾನಿಸಲಾಯಿತು. ದಿಯಾ ತುಪ್ಪದ ವಚನ ಪ್ರಾರ್ಥನೆ ಸಲ್ಲಿಸಿದರು. ರಶ್ಮಿ ತುಪ್ಪದ ಸ್ವಾಗತಿಸಿದರು. ಸುರೇಖಾ ನೆರಳೇಕರ ನಿರೂಪಿಸಿದರು. ಹೇಮಾ ಮುದ್ದಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net