ಪುರಸಿದ್ದೇಶ್ವರ ದೇಗುಲಕ್ಕೆ ನುಗ್ಗಿದ ಕಳ್ಳರು; ಭಾರತೀಯ ಪುರಾತತ್ವ ಇಲಾಖೆಯ ಭದ್ರತಾ ಲೋಪ ಆರೋಪ

Pura siddeshwara Temple
????????????????????????????????????
Published on

ಹಾವೇರಿ: ಇಲ್ಲಿನ ಗುತ್ತಲ ರಸ್ತೆಯ ಇತಿಹಾಸ ಪ್ರಸಿದ್ಧ, ಭಾರತೀಯ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಕಳ್ಳರು ದೇಗುಲದ ಪೂಜಾ ಸಾಮಗ್ರಿಗಳನ್ನು ಹೊತ್ತೊಯ್ದಿದ್ದಾರೆ.
ಜೂ.17ರ ರಾತ್ರಿ 8 ಗಂಟೆಯಿಂದ ಜೂ.21ರ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳರು ದೇವಸ್ಥಾನಕ್ಕೆ ನುಗ್ಗಿದ್ದಾರೆ. ಮೊದಲು ಅಲ್ಲಿದ್ದ ಗಂಟೆ ಕಿತ್ತಿದ್ದಾರೆ. ನಂತರ ಗರ್ಭ ಗುಡಿಗೆ ಹಾಕಿದ್ದ ಚಿಲಕವನ್ನು ಯಾವುದೋ ಆಯುಧ ಬಳಸಿ ಮೀಟಿ ಬೀಗ ಮುರಿದಿದ್ದಾರೆ. ಅಲ್ಲಿದ್ದ ಹಿತ್ತಾಳೆಯ ಕಳಸ, 2 ಹಿತ್ತಾಳೆಯ ಸಮೇಗಳು, ಸೇರಿ ಒಟ್ಟು 18 ಕೆಜಿ ತೂಕದ, 25 ಸಾವಿರ ರೂ. ಮೌಲ್ಯದ ಹಿತ್ತಾಳೆಯ ಸಾಮಗ್ರಿಗಳನ್ನು ಹೊತ್ತೊಯ್ದಿದ್ದಾರೆ. ಈ ಕುರಿತು ದೇವಸ್ಥಾನದ ಉಸ್ತುವಾರಿ ವಹಿಸಿಕೊಂಡಿರುವ ವಿಶ್ವನಾಥ ದೇಸಾಯಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯ ನಿರ್ಲಕ್ಷೃ ಹಾಗೂ ಭದ್ರತಾ ಲೋಪದಿಂದ ನಗರದ ಪ್ರಾಚೀನ ಹಾಗೂ ಪ್ರಸಿದ್ಧ ದೇಗುಲದಲ್ಲಿ ಇಂತಹ ಕೃತ್ಯ ನಡೆದಿದೆ. ಪುರಾತತ್ವ ಇಲಾಖೆ ಸಿಬ್ಬಂದಿ ದೇಗುಲಕ್ಕೆ ಬರುವ ಪ್ರವಾಸಿಗರು ಹಾಗೂ ಭಕ್ತರಿಗೆ ಫೋಟೋ ತೆಗೆಯಲೂ ಅಡ್ಡಿಪಡಿಸುವ ಮೂಲಕ ಕಿರಿಕಿರಿ ಉಂಟು ಮಾಡುತ್ತಾರೆ. ಆದರೆ, ಗರ್ಭಗುಡಿ ಒಳಗೆ ಕಳ್ಳರು ಬರುವವರೆಗೆ ಏನು ಮಾಡುತ್ತಿದ್ದರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನಾದರೂ ದೇಗುಲದ ಸಮಸ್ಯೆಗಳಿಗೆ ಇಲಾಖೆ ನಾಂದಿ ಹಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net