

ಹಾವೇರಿ: ವಿದ್ಯುತ್ ದರ ಏರಿಕೆ ಖಂಡಿಸಿ ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಕರೆ ನೀಡಿದ್ದ ಬಂದ್‌ಗೆ ಜಿಲ್ಲಾ ಕೇಂದ್ರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಾವೇರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳು, ವ್ಯಾಪಾರಸ್ಥರು ಗುರುವಾರ ಕೆಲಕಾಲ ಅಂಗಡಿ ಬಂದ್ ಮಾಡಿ ನಗರದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ನಗರದ ಪುರ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಎಂಜಿ ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಹೆಸ್ಕಾಂ ವಿಧಿಸಿದ ಹೊಸ ಸುಂಕ ಹಾಗೂ ಎಫ್‌ಎಸಿ ಅಸಹಜ ಹೆಚ್ಚಳ ವ್ಯಾಪಾರಸ್ಥರಿಗೆ ಆಘಾತ ಉಂಟುಮಾಡಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ನಮ್ಮ ಬಿಲ್‌ಗಳು ಏಕಾಏಕಿ ಶೇ.25ರಿಂದ 75ರಷ್ಟು ಹೆಚ್ಚಳವಾಗಿವೆ. ಇದರಿಂದ ವ್ಯಾಪಾರ ಮಾಡುವುದೇ ಕಷ್ಟಕರ ಎನಿಸಿದೆ.
ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಸಲಾಗಿದೆ. ಶೇ.5ರಷ್ಟು ಏರಿಸಿದ್ದರೆ ಯಾರೂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ, ಏಕಾಏಕಿ ಶೇ.75ರಷ್ಟು ಏರಿಸಿರುವುದು ತಪ್ಪು. ಏರಿಕೆ ಕುರಿತು ಗ್ರಾಹಕರೊಂದಿಗೆ ಚರ್ಚಿಸದೇ ಏಕಪಕ್ಷೀಯವಾಗಿ ಏರಿಕೆ ಮಾಡಿರುವುದು ಖಂಡನೀಯ. ಇದರಿಂದ ಕೈಗಾರಿಕೆಗಳು ಮತ್ತು ವ್ಯಾಪಾರಿಗಳ ಪಥನವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್, ಜಿಲ್ಲಾಧಿಕಾರಿಯವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.
ಪ್ರತಿಭಟನೆಯಲ್ಲಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಕೈಗಾರಿಕೆಗಳ ಸಂಘ, ಹೋಟೆಲ್ ಉದ್ಯಮಿಗಳ ಸಂಘ, ಪೆಟ್ರೋಲ್ ಬಂಕ್, ಕಿರಾಣಿ, ಜವಳಿ, ಚಿನ್ನದ ವ್ಯಾಪಾರಿಗಳು, ಚಿತ್ರಮಂದಿರಗಳ ಮಾಲೀಕರ ಸಂಘ, ಎಪಿಎಂಸಿ ವರ್ತಕರ ಸಂಘ, ಲಾರಿ ಚಾಲಕರು ಮತ್ತು ಮಾಲೀಕರ ಸಂಘ, ಹಾವೇರಿ ಮರ್ಚಂಟ್ಸ್ ಅಸೋಸಿಯೇಶನ್ಸ್, ಸ್ಟೇಶನರಿ ವರ್ತಕರ ಸಂಘ, ಸೇರಿದಂತೆ ಹಲವಾರು ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಹಾವೇರಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರವಿ ಮೆಣಸಿನಕಾಯಿ, ಉದ್ಯಮಿ ಅಜಿತ್ ಮಾಗಾವಿ, ಜಿಪಂ ಮಾಜಿ ಸದಸ್ಯ ವಿರುಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ, ವಿಜಯಕುಮಾರ ಚಿನ್ನಿಕಟ್ಟಿ, ವಿ.ಜಿ.ಬಣಕಾರ, ಜೆಪಿ. ರೋಟರಿ, ಶಿವರಾಜ ಮರ್ತೂರ, ಪ್ರಕಾಶ ಶೆಟ್ಟಿ, ಸಿದ್ದು ಮರೆಣ್ಣವರ, ಬಸವರಾಜ ಮಾಸೂರು, ರಾಜು ಜೈನ್, ಸುರೇಶ ಕಡಕೋಳ, ಮಹೇಶ ಹುಗ್ಗಿ, ರಮೇಶ ಪಾಟೀಲ, ಎಸ್.ಎ. ವಜ್ರಕುಮಾರ, ಪ್ರಭು ಹಿಟ್ನಳ್ಳಿ, ಮಲ್ಲಿಕಾರ್ಜುನ ಹಂದ್ರಾಳ, ಬಾಬಣ್ಣ ಹಿರೇಗೌಡ್ರ, ಪಿ.ಡಿ ಶಿರೂರ, ಮಹದೇವಗೌಡ ಪಾಟೀಲ, ಸುಜಿತ ಜೈನ್, ರಮೇಶ ಬಳ್ಳಾರಿ, ಸೇರಿದಂತೆ ನೂರಾರು ಜನರ ಪಾಲ್ಗೊಂಡಿದ್ದರು.