

ಹಾವೇರಿ: ಸರ್ಕಾರದಿಂದ ಯಾವುದೇ ಧನ ಸಹಾಯ ಇಲ್ಲದಿದ್ದರೂ ಸಹಕಾರ ಬ್ಯಾಂಕ್‌ಗಳು ಸಾರ್ವಜನಿಕರ ವಿಶ್ವಾಸದಿಂದಲೇ ಬೆಳೆದು ನಿಂತಿವೆ. ಈ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗವನ್ನೂ ನೀಡುತ್ತಿವೆ. ಉದ್ಯೋಗ ಸೃಷ್ಟಿಸುವುದೂ ಒಂದು ಸಾಧನೆಯೇ ಸರಿ ಎಂದು ಸಂಸದೀಯ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು. ನಗರದ ರಜನಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕ್‌ನ ಬೆಳ್ಳಿ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅರ್ಬನ್ ಸಹಕಾರಿ ಬ್ಯಾಂಕ್‌ಗಳು ಕೇವಲ ಹಣದ ವ್ಯವಹಾರಕ್ಕೆ ಸೀಮಿತವಾಗಿರದೇ ಪ್ರಜಾಪ್ರಭುತ್ವದಲ್ಲಿ ನಾಯಕತ್ವ ಬೆಳೆಸುವ ಸಹಕಾರಿ ಸಂಸ್ಥೆಗಳಾಗಿವೆ. ಈ ನಿಟ್ಟಿನಲ್ಲಿ ಹಾವೇರಿಯ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕ್ ಮಹಿಳೆಯರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಮಹಿಳೆಯರೇ ಕಟ್ಟಿ ಬೆಳೆಸಿದ ಬ್ಯಾಂಕು ಹೆಮ್ಮೆ ಪಡುವ ರೀತಿಯಲ್ಲಿ ಬೆಳೆದು ನಿಂತಿದೆ. ಇಷ್ಟು ಗಟ್ಟಿಯಾಗಿ ಬೆಳೆಯಲಿಕ್ಕೆ ಸಂಸ್ಥೆಯ ನಿರ್ದೇಶಕರು ಹಾಗೂ ನೌಕರರ ಪಾತ್ರ ಬಹಳ ಮುಖ್ಯವಾಗಿದೆ. ಬೆಳ್ಳಿ ಮಹೋತ್ಸವದಿಂದ ಶತಮಾನೋತ್ಸವ ಆಚರಿಸುವಂತಾಗಲಿ ಎಂದು ಹರಸಿದರು.
ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ದಾಕ್ಷಾಯಣಿ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಲೇಡೀಸ್ ಕ್ಲಬ್‌ವೊಂದು ಹರಟೆ ಮಾಡುವ ಸಂದರ್ಭದಲ್ಲಿ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂದು ಚಿಂತನೆ ನಡೆಸಿದಾಗ ಹುಟ್ಟಿದ್ದೇ ಈ ಪ್ರಿಯದರ್ಶಿನಿ ಸಹಕಾರಿ ಬ್ಯಾಂಕ್. ಆರ್‌ಬಿಐನಿಂದ ಮಾನ್ಯತೆ ಪಡೆದಿರುವ ಜಿಲ್ಲೆಯ ಏಕೈಕ ಮಹಿಳಾ ಅರ್ಬನ್ ಸಹಕಾರ ಬ್ಯಾಂಕ್ ಇದಾಗಿದ್ದು, ವಾರ್ಷಿಕ 40 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ಯಾಂಕ್‌ನ ಸಂಸ್ಥಾಪಕ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಆರಂಭದಲ್ಲಿ ಬ್ಯಾಂಕ್ ಸ್ಥಾಪನೆಗೆ ಕಾರಣೀಭೂತರಾಗಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಆಚರಿಸಲಾಯಿತು.
ಸಮಾರಂಭದಲ್ಲಿ ಇನ್‌ಕಮ್ ಟ್ಯಾಕ್ಸ್ ಅಡಿಷನಲ್ ಕಮಿಷನರ್ ಪ್ರಿಯದರ್ಶಿನಿ ಬಸೇಗೆಣ್ಣಿ, ದಂತ ವೈದ್ಯೆ ಡಾ.ಕಲ್ಪನಾ ಎಂ.ಎಸ್., ಸುಧಾಕರ ಭಟ್, ಪುಂಡಲೀಕ ಹೇರೂರ, ಮಲ್ಲಮ್ಮ, ಷಣ್ಮುಖಪ್ಪ ಮುಚ್ಚಂಡಿ, ಕೊಟ್ರೇಶಪ್ಪ ಬಸೇಗಣ್ಣಿ, ಬ್ಯಾಂಕ್‌ನ ನಿರ್ದೇಶಕರಾದ ರತ್ನವ್ವ ಹೇರೂರ, ಯಶೋಧಾ ಮಾಸೂರ, ರತ್ನಾ ಅಂಗಡಿ, ನೇತ್ರಾವತಿ ಮೇಳದವರ, ಅಂಜನಾ ಕುಂಠೆ, ಲೀಲಾ ಗಡಾದ, ಸುಧಾ ಆನೂರಶೆಟ್ರ, ಪ್ರವೀಣಾ ಕೋರಿಶೆಟ್ಟರ, ಹೇಮಲತಾ ಕರ್ಜಗಿ, ಶೈಲಾ ಬಸೇಗೆಣ್ಣಿ, ಪಾರ್ವತಿ ಭಾವನೂರ, ಬಸವರಾಜ ಚಿಕ್ಕಮಠ, ಕವಿತಾ ಕಿತ್ತೂರ, ವ್ಯವಸ್ಥಾಪಕ ಎನ್.ಜಿ.ರಟ್ಟೀಹಳ್ಳಿ, ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕ್‌ನ ಉಪಾಧ್ಯಕ್ಷೆ ವಿಮಲ್ ಹಿಂಚಿಗೇರಿ ಸ್ವಾಗತಿಸಿದರು. ಭೂಮಿಕಾ ರಜಪೂತ ಪ್ರಾರ್ಥಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.