ಪತ್ರಕರ್ತರಿಲ್ಲದೇ ಸಮಾಜ ಮುನ್ನಡೆಯಲ್ಲ; ಅಭಿವೃದ್ಧಿ ವಿಚಾರದಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು; ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರದಲ್ಲಿ ಸಚಿವ ಶಿವಾನಂದ ಪಾಟೀಲ

30 HVR 4 A
Published on

ಹಾವೇರಿ: ಸಮಾಜವನ್ನು ಮೊದಲಿಗೆ ನಿಯಂತ್ರಣಕ್ಕೆ ತಂದವರು ಪತ್ರಕರ್ತರು ಎಂದರೆ ತಪ್ಪಾಗಲಾರದು. ದೇಶದ ಅಭಿವೃದ್ಧಿಯಲ್ಲಿ ಪತ್ರಕರ್ತರ ಕೊಡುಗೆ ದೊಡ್ಡದು. ಒಂದರ್ಥದಲ್ಲಿ ಪತ್ರಕರ್ತರಿಲ್ಲದೇ ಸಮಾಜವನ್ನು ಮುನ್ನಡೆಸುವುದು ಕಷ್ಟಕರ ಎಂದು ಜವಳಿ, ಕೃಷಿ ಮತ್ತು ಸಕ್ಕರೆ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರ ಮಕ್ಕಳಿಗಾಗಿ ಆಯೋಜಿಸಿದ್ದ ‘ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಕೇವಲ ರಾಜಕಾರಣಿಗಳ ಬಗ್ಗೆ ಮಾತ್ರ ಬರೆಯದೇ ಸಂತರು, ಶರಣರು, ರೈತರು ಹೀಗೆ ಎಲ್ಲ ವಿಷಯಗಳ ಬಗೆಗೆ ಮತ್ತು ಒಳಿತು ಕೆಡುಕುಗಳ ವಿಮರ್ಷೆ ಮಾಡುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯ, ಸಾಮರಸ್ಯ ಕಾಪಾಡುತ್ತಿದ್ದಾರೆ ಎಂದರು.
ಇತ್ತೀಚೆಗೆ ಸುದ್ದಿ ನಿಖರತೆಯಲ್ಲಿ ಎಲ್ಲೋ ಒಂದು ಕಡೆ ಲೋಪವಾಗುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ವೇಗದ ಸುದ್ದಿ ಕೊಡುವ ನಿಟ್ಟಿನಲ್ಲಿ ತಪ್ಪು ಮಾಹಿತಿ ನೀಡುವುದು ಬೇಡ. ಸುದ್ದಿ ಅಥವಾ ಘಟನೆಯ ವೈಭವೀಕರಣದಿಂದ ಜಿಲ್ಲೆಯ ಘನತೆ ಮತ್ತು ಹೆಸರಿಗೆ ಧಕ್ಕೆ ಬರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸುದ್ದಿ ಮಾಡಿದಲ್ಲಿ ಉತ್ತಮ ಎಂದು ಪತ್ರಕರ್ತರಿಗೆ ಸಲಹೆ ಮಾಡಿದರು. ಅಭಿವೃದ್ದಿ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ನಮ್ಮ ಸಂಘ ದೇಶದಲ್ಲೇ ಅತಿದೊಡ್ಡ ಪತ್ರಕರ್ತರ ಸಂಘಟನೆಯಾಗಿದೆ. ಪ್ರಸ್ತುತ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಎಂದು ಸುಮಾರು 75 ಲಕ್ಷ ಇದ್ದು, ಅದನ್ನು ಪತ್ರಕರ್ತರ ಮಕ್ಕಳಿಗೆ ಸದ್ವಿನಿಯೋಗ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿ ಮತ್ತು ನಕಲಿ ಪತ್ರಕರ್ತರ ಹಾವಳಿ ಹೆಚ್ಚುತ್ತಿದೆ. ಜೊಳ್ಳು ಪತ್ರಕರ್ತರ ಮಧ್ಯೆ ಉತ್ತಮ ಪತ್ರಕರ್ತರನ್ನು ಗುರುತಿಸಿ ಅವರನ್ನು ಉಳಿಸಿಕೊಳ್ಳುವ ಕೆಲಸ ಪ್ರಯಾಸಕರವಾಗಿದೆ. ಉತ್ತಮ ಪತ್ರಕರ್ತನಾಗಲು ಸಾಕಷ್ಟು ಸಮಯಾವಕಾಶ ಹಾಗೂ ಜ್ಞಾನ ಬೇಕಾಗಿದೆ. ಪತ್ರಿಕಾ ಮೌಲ್ಯಗಳನ್ನು ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಸಮಾಜ ಪತ್ರಕರ್ತರ ಮೇಲೆ ಇಟ್ಟಿರುವ ವಿಶ್ವಾಸಾರ್ಹತೆ ಉಳಿಸಿಕೊಂಡು ಮುಂದುವರೆಯ ಬೇಕಾದ ಸಂದಿಗ್ಧತೆ ನಮ್ಮ ಮುಂದಿದೆ ಎಂದು ಎಚ್ಚರಿಸಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತಲೂ ಹೆಚ್ಚಿನ ಅಂಕ ಪಡೆದ 125 ಮಕ್ಕಳ ಪೈಕಿ ಹಾಜರಿದ್ದ 56 ಮಕ್ಕಳನ್ನು ಸನ್ಮಾನಿಸಿ, ನಗದು ಬಹುಮಾನ, ಸ್ಮರಣಿಕೆ, ಪ್ರಮಾಣ ಪತ್ರ ವಿತರಿಸಲಾಯಿತು. ಇತ್ತೀಚೆಗೆ ನಿವೃತ್ತಿಯಾದ ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ ಅವರನ್ನು ಸನ್ಮಾನಿಸಲಾಯಿತು.
ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ, ಅಜ್ಜಮಾಡ ರಮೇಶ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ, ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹುಡಾ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗೆಣ್ಣಿ, ಪಿ.ಎಂ.ಸತ್ಯಪ್ಪನವರ, ವೀರೇಶ ಮಡ್ಲೂರ, ಮತ್ತಿತರರು ಉಪಸ್ಥಿತರಿದ್ದರು.
ಸವಾಲು ಮೆಟ್ಟಿ ನಿಂತ ಪತ್ರಿಕೆಗಳು
ಇಂದು ಹಲವು ಏಳು-ಬೀಳುಗಳನ್ನು ಕಾಣುವಂತಾಗಿದೆ. ಎಲೆಕ್ಟ್ರಾನಿಕ್ ಮತ್ತು ಯೂಟ್ಯೂಬ್ ಚಾಲನೆಗಳಿಂದ ಹಲವು ತಾಂತ್ರಿಕ ಸವಾಲುಗಳನ್ನು ಎದುರಿಸುವಂತಾಗಿದೆ. ತಾಂತ್ರಿಕತೆ ಬೆಳೆದಂತೆ, ಬದಲಾದಂತೆ ಆಯಾ ಕಾಲಘಟ್ಟದ ಬದಲಾವಣೆಗಳಿಗೆ ನಾವುಗಳು ಒಗ್ಗಿಕೊಳ್ಳಬೇಕಿದೆ. ಆದಾಗ್ಯೂ ಈ ಎಲ್ಲ ಸವಾಲುಗಳನ್ನು ಮೆಟ್ಟಿ ಮುದ್ರಣ ಮಾದ್ಯಮ ಮುಂದುವರೆಯುತ್ತಿರುವುದು ಸ್ವಾಗತಾರ್ಹ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
10 ಲಕ್ಷ ರೂ. ಅನುದಾನ
ಜಿಲ್ಲಾ ಪತ್ರಕರ್ತರ ಭವನದ ಅಭಿವೃದ್ದಿಗಾಗಿ ತಮ್ಮ ಅನುದಾನದಲ್ಲಿ ತಲಾ 5 ಲಕ್ಷ ರೂ. ಅನುದಾನ ನೀಡುವುದಾಗಿ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ ಹಾಗೂ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಘೋಷಿಸಿದರು.
ಡೊಳ್ಳು ಕುಣಿತ
ಸಾಗರದ ಡೊಳ್ಳು ಕುಣಿತ ತಂಡ ಸಮುದಾಯ ಭವನಕ್ಕೆ ಆಗಮಿಸಿದ ಅತಿಥಿಗಳನ್ನು ವಿಶಿಷ್ಟವಾಗಿ ಸ್ವಾಗತಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕೋಟ್:
ರಾಜ್ಯದ 175 ಪತ್ರಕರ್ತರಿಗೆ ಮಾತ್ರ ಮಾಸಿಕ ನಿವೃತ್ತಿ ವೇತನ ಬರುತ್ತಿರುವ ವಿಚಾರ ಗೊತ್ತಾಯಿತು. ನಿವೃತ್ತಿ ವೇತನ ಹೆಚ್ಚಿಸುವುದು ಹಾಗೂ ಹೆಚ್ಚಿನ ಜನರಿಗೆ ನಿವೃತ್ತಿ ವೇತನ ಕೊಡಿಸಲು ಬೇಕಾದ ಅಗತ್ಯ ಕ್ರಮಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
- ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net