ಪೌರ ಕಾರ್ಮಿಕರಿಂದ ನಗರದ ಗೌರವ ಹೆಚ್ಚಳ; ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಶಾಸಕ ಲಮಾಣಿ ಭರವಸೆ

27 HVR 5
Published on

ಹಾವೇರಿ: ನಗರದ ಸ್ವಚ್ಛತೆ ಕಾಪಾಡುವುದು ಪೌರಕಾರ್ಮಿಕರ ಜವಾಬ್ದಾರಿಯಾಗಿದೆ. ಪೌರ ಕಾರ್ಮಿಕರು ನಿಷ್ಠೆಯಿಂದ ಕೆಲಸ ಮಾಡಿದರೆ ಜನ ಆರೋಗ್ಯದಿಂದ ಇರುವ ಜತೆಗೆ ನಗರದ ಗೌರವ ಹೆಚ್ಚುತ್ತದೆ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಗುರು ಭವನದಲ್ಲಿ ಬುಧವಾರ ಪೌರಾಡಳಿತ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅಪಾರವಾಗಿದೆ. ನಗರದ ಸ್ವಚ್ಛತೆ ಆರೋಗ್ಯ ಕಾಪಾಡುವ ಪೌರಕಾರ್ಮಿಕರು ಆರೋಗ್ಯ ಹಾಗೂ ನೆಮ್ಮದಿಯಿಂದ ಬದುಕು ನಡೆಸಲೆಂದು ಜ್ಯೋತಿ ಸಂಜೀವಿನಿ ಯೋಜನೆ ರೂಪಿಸಲಾಗಿದೆ. ಮನೆ, ನಿವೇಶನ ಇಲ್ಲದ ಪೌರ ಕಾರ್ಮಿಕರಿಗೆ ಮನೆ ನಿರ್ಮಾಣ ನಿವೇಶನ ರಹಿತರಿಗೆ ನಿವೇಶನ ಒದಗಿಸಿ ಮನೆ ನಿರ್ಮಾಣ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾತನಾಡಿ, ಪೌರ ಕಾರ್ಮಿಕರು ಖುಷಿಯಾಗಿ ಕೆಲಸ ಮಾಡಿದರೆ, ನಗರ ಸ್ವಚ್ಛವಾಗಿರುತ್ತದೆ. ನಗರದ ಸ್ವಚ್ಛತೆಯ ನಗು ನೋಡಬೇಕಾದರೆ ಮೊದಲು ಪೌರಾಕಾರ್ಮಿಕರ ಮುಖದಲ್ಲಿ ನಗು ನೋಡಬೇಕು ಎಂದರು.
ಪ್ರಾಸ್ತಾವಿಕವಾಗಿ ಪೌರಾಯುಕ್ತ ಪರಶುರಾಮ ಚಲವಾದಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪೌರಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಎಂ.ಎಂ ಮೈದೂರ, ನಗರಸಭೆ ಸದಸ್ಯರಾದ ವಿಶಾಲಾಕ್ಷಿ ಆನವಟ್ಟಿ, ಚೈತ್ರಾ ಹತ್ತಿ, ಶಶಿಕಲಾ ಮಾಳಗಿ, ಚನ್ನಮ್ಮ ಬ್ಯಾಡಗಿ, ರೇಣುಕಾ ಪುತ್ರನ್, ಪೂಜಾ ಹಿರೇಮಠ, ರಜಿಯಾಬಾನು ದೇವಿಹೋಸೂರ, ಚಂದ್ರು ಬಿದರಿ, ನಾಗರಾಜ ಮರಡಿ, ಪರಿಸರ ಅಭಿಯಂತರ ಶಿವರಾಜ ಕನಕಪ್ಪನವರ, ಸೇರಿದಂತೆ ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ನಗರ ಸಭೆ ಲೆಕ್ಕಾಧಿಕಾರಿ ಶೋಭಾ ಉದಗಟ್ಟಿ ಸ್ವಾಗತಿಸಿ, ವಂದಿಸಿದರು. ಪೌರಕಾರ್ಮಿಕರ ಇಲಾಖೆಯ ಹಿರಿಯ ಅರೋಗ್ಯ ನಿರೀಕ್ಷಕ ಅಲ್ತಮಶ್ ನಿರೂಪಿಸಿದರು.
ಮೆರವಣಿಗೆ: ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಡಾ.ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಆರಂಭವಾಗಿ ಸುಭಾಸ ಸರ್ಕಲ್, ಮೇಲಿನ ಪೇಟೆ, ಎಂ.ಜಿ. ರೋಡ್, ಮಹಾತ್ಮ ಗಾಂಧಿ ವೃತ್ತ, ಜೆ.ಪಿ. ವೃತ್ತ, ಹೈಸ್ಕೂಲ್ ರೋಡ್ ಮಾರ್ಗವಾಗಿ ಜಿಲ್ಲಾ ಗುರು ಭವನದಲ್ಲಿ ಮುಕ್ತಾಯಗೊಂಡಿತು.

ಕೋಟ್:
ಹಾವೇರಿ ನಗರಸಭೆಯ ಹಲವಾರು ವಿಷಯಗಳು ಸರ್ಕಾರದ ಹಂತದಲ್ಲಿ ಶೀಗ್ರದಲ್ಲೇ ಅನುಮೋದನೆ ಪಡೆದುಕೊಳ್ಳಲಿವೆ. ಮುಂದಿನ ದಿನಗಳಲ್ಲಿ ಹಾವೇರಿ ನಗರ ಅಭಿವೃದ್ಧಿಯಲ್ಲಿ ಒಳ್ಳೆಯ ದಿನಗಳನ್ನು ಕಾಣುತ್ತದೆ.
ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net