20 ಪಿಒಪಿ ಗಣೇಶ ಮೂರ್ತಿಗಳು ವಶಕ್ಕೆ; ವಿಜಯವಾಣಿ ವರದಿ ಪರಿಣಾಮ; ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆಯಿಂದ ದಾಳಿ

18 HVR 2
Published on

ಹಾವೇರಿ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಹಾವೇರಿ ನಗರಸಭೆ ಅಧಿಕಾರಿಗಳ ತಂಡ ಇತ್ತೀಚೆಗೆ ನಗರದ ವಿವಿಧೆಡೆ ದಾಳಿ ನಡೆಸಿ, 20 ಪಿಒಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ನಗರದ ವೀರಭದ್ರೇಶ್ವರ ದೇವಸ್ಥಾನ, ಗುತ್ತಲ ರಸ್ತೆಯ ಹಳೇ ಎಪಿಎಂಸಿ ಮಾರುಕಟ್ಟೆ, ಮತ್ತಿತರ ಸ್ಥಳಗಳಿಗೆ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತು. ವೀರಭದ್ರೇಶ್ವರ ದೇಗುಲದಲ್ಲಿ ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿದ್ದ 2ರಿಂದ 4 ಅಡಿ ಎತ್ತರದ ಸಾರ್ವಜನಿಕ ಗಣೇಶ ಮೂರ್ತಿಗಳು ಸೇರಿ 20 ಪಿಒಪಿ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿದೆ.

ಯೋಜನಾ ನಿರ್ದೇಶಕ ಸಿ.ಚಂದ್ರಪ್ಪ, ಮಂಡಳಿಯ ಉಪ ಪರಿಸರ ಅಧಿಕಾರಿ ಲೋಹಿತಕುಮಾರ ಪಿ.ಜೆ., ನಗರಸಭೆ ಪೌರಾಯುಕ್ತ ಎಚ್.ಕಾಂತರಾಜ, ಪ್ರಭಾರ ಪರಿಸರ ಅಭಿಯಂತರ ರೂಪಾ ನಾಯಕ, ಆರೋಗ್ಯ ನಿರೀಕ್ಷಕ ಗಿರೀಶ ಹರವಿ, ಶಿವಾನಂದ ದೊಡ್ಡಮನಿ, ಇತರ ಸಿಬ್ಬಂದಿ ಇದ್ದರು.

ಗಣೇಶ ಹಬ್ಬದ ಹಿನ್ನೆಲೆ ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣೇಶ ಮೂರ್ತಿಗಳ ಮಾರಾಟ, ಸಾಗಾಟದ ಕುರಿತು ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ‘ಪಿಒಪಿ ಗಣೇಶನಿಗೆ ಹೇಳಿ ಗುಡ್‌ಬೈ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಆಗಸ್ಟ್ 9ರಂದು ವಿಶೇಷ ವರದಿ ಹಾಗೂ ‘ಲೌಡ್‌ಸ್ಪೀಕರ್’ ಅಂಕಣದ ಮೂಲಕ ಬೆಳಕು ಚೆಲ್ಲಿತ್ತು. ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿದ್ದಾರೆ. ಇನ್ನೂ ಹಲವೆಡೆ ಪಿಒಪಿ ಸಂಗ್ರಹ ಕಾರ್ಯ ನಡೆದಿದ್ದು, ಹಬ್ಬ ಮುಗಿಯುವವರೆಗೆ ನಿರಂತರ ಪರಿಶೀಲನೆ ಆಗಬೇಕಿದೆ.

ಮುಚ್ಚಳಿಕೆ ಪತ್ರದ ಎಚ್ಚರಿಕೆ

ಹಾವೇರಿ ನಗರದಲ್ಲಿ 3 ಕಡೆ, ರಾಣೆಬೆನ್ನೂರ 4, ಹಾನಗಲ್ಲ 4, ಹಿರೇಕೆರೂರ 3 ಕಡೆಗಳಲ್ಲಿ ಪಿಒಪಿ ಗಣೇಶನ ಪರಿಶೀಲನೆ ಮಾಡಲಾಗಿದೆ. ಗಣೇಶ ಮೂರ್ತಿ ತಯಾರಕರು, ಮಾರಾಟಗಾರರ ಬಳಿ, ‘ಯಾವುದೇ ಕಾರಣಕ್ಕೂ ನಾವು ಪಿಒಪಿ ಗಣೇಶನ ಮಾರಾಟ ಮಾಡಲ್ಲ. ಒಂದು ವೇಳೆ ಪಿಒಪಿ ಮಾರಾಟ ಮಾಡುವುದು ಕಂಡು ಬಂದಲ್ಲಿ ತಾವು ನಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದು’ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗುತ್ತಿದೆ. ವಶಪಡಿಸಿಕೊಂಡ ಪಿಒಪಿ ಗಣೇಶ ಮೂರ್ತಿಗಳನ್ನು ಮಂಡಳಿಯ ಅಧಿಕಾರಿಗಳ ಸಮ್ಮುಖದಲ್ಲಿ ನಗರಸಭೆ ವತಿಯಿಂದ ಮಷಿನ್‌ನಲ್ಲಿ ಪೌಡರ್ ಮಾಡಿ ನಾಶಪಡಿಸಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ಲೋಹಿತಕುಮಾರ ಪಿ.ಜೆ. ‘ವಿಜಯವಾಣಿ’ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net